ಒಗ್ಗಟ್ಟಿನಿಂದ ಕೆಲಸ ಮಾಡೋಣ: ಸಿ.ಎಂ

ನವದೆಹಲಿ: ‘ರಾಜ್ಯದ ವಿಚಾರ ಬಂದಾಗ, ರಾಜ್ಯದ ಹಿತಕ್ಕಾಗಿ ನಾವೆಲ್ಲ ಒಟ್ಟಿಗೇ ಕೆಲಸ ಮಾಡೋಣ. ರಾಜ್ಯದ ಜನರ ಕಲ್ಯಾಣಕ್ಕೆ ಪಕ್ಷ ರಾಜಕಾರಣ ಪಕ್ಕಕ್ಕೆ ಇಡೋಣ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಹಲವು ವರ್ಷಗಳಿಂದ ಕೇಂದ್ರ ಸರ್ಕಾರದ ಮಟ್ಟದಲ್ಲಿ ನನೆಗುದಿಗೆ ಬಿದ್ದಿರುವ ರಾಜ್ಯದ ಪ್ರಸ್ತಾವಗಳಿಗೆ ಅನುಮೋದನೆ ಪಡೆಯುವ ಹಾಗೂ ಒತ್ತಡ ಹೇರುವ ಸಂಬಂಧ ಕರ್ನಾಟಕ ಭವನದಲ್ಲಿ ಸೋಮವಾರ ರಾತ್ರಿ ನಡೆದ ಸಂಸದರ ಸಭೆಯಲ್ಲಿ ಅವರು ಮಾತನಾಡಿದರು.
‘ರಾಜ್ಯದ ಪ್ರಗತಿಗೆ ನಿಮ್ಮ ಸಹಕಾರ ಬಯಸುತ್ತೇನೆ. ಕೇಂದ್ರ ಸರ್ಕಾರದ ಮುಂದೆ ಬಾಕಿ ಉಳಿದಿರುವ ರಾಜ್ಯದ ನಾನಾ ಯೋಜನೆಗಳಿಗೆ ಅನುಮತಿ ದೊರಕಿಸಿಕೊಡಲು ನಿಮ್ಮ ಸಹಕಾರ ಬಹುಮುಖ್ಯ’ ಎಂದು ಅವರು ಹೇಳಿದರು.
‘ರಾಜ್ಯದಲ್ಲಿನ ಬರ ಪರಿಸ್ಥಿತಿ ಬಗ್ಗೆ ಪ್ರಧಾನಿ ಅವರಿಗೆ ಪತ್ರ ಬರೆದಿದ್ದೇನೆ. ಅಗತ್ಯ ನೆರವು ಕೋರಿದ್ದೇನೆ. ನೆರವು ಸಿಗಲು ನಿಮ್ಮ ಸಹಕಾರ ಬೇಕು’ ಎಂದರು.
ಗೋದಾವರಿ, ಕೃಷ್ಣಾ, ದಕ್ಷಿಣ ಪಿನಾಕಿನಿ, ಕಾವೇರಿ ನದಿಗಳ ಜೋಡಣೆ ಯೋಜನೆಗೂ ನಾವು ಒಪ್ಪಿದ್ದೇವೆ. ಇದೊಂದು ಐತಿಹಾಸಿಕ ತೀರ್ಮಾನ ಎಂದು ಅವರು ಹೇಳಿದರು. ‘ಮೇಕೆದಾಟು ಯೋಜನೆ ಕುರಿತು ಸುಪ್ರೀಂ ಕೋರ್ಟ್ ಎರಡೂ ರಾಜ್ಯಗಳಿಗೆ ಅನುಕೂಲ ಆಗುವಂತೆ ತೀರ್ಪು ಕೊಟ್ಟಿದೆ. ಮಹದಾಯಿ ಯೋಜನೆ ಅಡೆತಡೆ ನಿವಾರಣೆಗೆ ವಕೀಲರ ಜತೆ ಸಮಾಲೋಚನೆ ನಡೆಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ರಾಜ್ಯದ ಬಾಕಿ ಯೋಜನೆಗಳ ನಿರ್ವಹಣೆಗೆ ಕರ್ನಾಟಕ ಭವನದಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು. ನಮ್ಮ ಯೋಜನೆ ಫಾಲೋಅಪ್ ಮಾಡಲು ಪ್ರತ್ಯೇಕ ಸ್ಥಾನೀಯ ಆಯುಕ್ತರ ನೇಮಕ ಸೇರಿದಂತೆ ಹೊಸ ತಂಡ ರಚಿಸಲಾಗುವುದು ಎಂದು ಅವರು ತಿಳಿಸಿದರು.
ಸಂಘರ್ಷ ಬೇಡ, ಸಹಕಾರದಲ್ಲಿ ರಾಜ್ಯದ ಪರ ಕೆಲಸ ಮಾಡೋಣ ಎಂದು ಸಿ.ಎಂ. ಹೇಳಿದ್ದಾರೆ. ಕರ್ನಾಟಕದ ಹಿತದ ವಿಷಯದಲ್ಲಿ ನಾವು ಸಹಕಾರ ನೀಡುವ ಭರವಸೆ ನೀಡಿದ್ದೇವೆ. ಮಹದಾಯಿ ಯೋಜನೆ ಬಗ್ಗೆ ಗೋವಾ ಪಿಸಿಸಿಎಫ್‌ ನೋಟಿಸ್‌ ನೀಡಿದ್ದಕ್ಕೆ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಈ ಪ್ರಕರಣವನ್ನು

ರಾಜ್ಯ ಸರ್ಕಾರ ವಾಪಸ್ ಪಡೆಯಬೇಕಿದೆ. ಈ ವಿಷಯವನ್ನು ಸಿ.ಎಂ. ಗಮನಕ್ಕೆ ತಂದಿದ್ದೇವೆ. ಅದಕ್ಕೆ ಅವರು ಒಪ್ಪಿದ್ದಾರೆ.
-ಪ್ರಲ್ಲಾದ ಜೋಶಿ, ಕೇಂದ್ರ ಶಿಕ್ಷಣ ಸಚಿವ
ಸಭೆಯಲ್ಲಿ ಸಿಎಂ ಹೇಳಿದ್ದೇನು?
ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ ಪ್ರಮುಖ 13 ಯೋಜನೆಗಳಿಗೆ ಅನುಮತಿ ಕೊಡಿಸಿ
15ನೇ ಹಣಕಾಸು ಆಯೋಗದ ಗ್ರಾ.ಪಂ ಅನುದಾನ ಬಿಡುಗಡೆಗೆ ಒತ್ತಡ ಹೇರಿ.
ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಯೋಜನೆ ಅನುಮೋದನೆಗೆ ಒತ್ತಡ ಬೆಂಗಳೂರು ಉಪನಗರ ರೈಲು ಯೋಜನೆಗೆ ಅನುಮೋದನೆ ದೊರಕಿಸಿಕೊಡಲು ಕೋರಿಕೆ
ಕೋಲಾರದಲ್ಲಿ ರೈಲು ಬೋಗಿ ಕಾರ್ಖಾನೆ ಜಾರಿಗೆ ಮನವಿ
ವಾಣಿಜ್ಯ ಉದ್ದೇಶಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣ ಪುನರಾರಂಭಕ್ಕೆ ಒತ್ತಡ
ಸಾಗರಮಾಲಾ 2.0 ಕಾರ್ಯಯೋಜನೆಗೆ ತಕ್ಷಣ ಅನುಮೋದನೆ ಬೇಕು
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಮನವಿ
ತೆಂಗು, ಅಡಿಕೆ ಬೆಳೆಗಳ ಕೀಟ ನಿಯಂತ್ರಣಕ್ಕೆ ನೆರವು ಅಗತ್ಯ