ಬೆಂಗಳೂರು: ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನ್ಯಾಯಬೆಲೆ ಅಂಗಡಿಗಳ ಕಾರ್ಯಾವಧಿಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಪಡಿತರ ವಿತರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಹೊಸ ಆದೇಶ ಹೊರಡಿಸಿದೆ.
ಈವರೆಗೆ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 8.00 ರಿಂದ ಮಧ್ಯಾಹ್ನ 12.00 ಗಂಟೆಯವರೆಗೆ ಹಾಗೂ ಸಂಜೆ 4.00 ರಿಂದ ರಾತ್ರಿ 8.00 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದವು. ಆದರೆ, ಇನ್ಮುಂದೆ ಪ್ರತಿದಿನ ಬೆಳಿಗ್ಗೆ 6.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಪಡಿತರ ವಿತರಣೆ ನಡೆಸುವಂತೆ ಆಹಾರ ಇಲಾಖೆ ಸೂಚಿಸಿದೆ.
ಜುಲೈ ತಿಂಗಳ ಆಹಾರ ಧಾನ್ಯ ಹಾಗೂ ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಹಲವು ಜಿಲ್ಲೆಗಳಲ್ಲಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ, ಸಗಟು ಮಳಿಗೆಗಳಿಂದ ಸಂಪೂರ್ಣ ದಾಸ್ತಾನು ಎತ್ತುವಳಿ ಪೂರ್ಣಗೊಳಿಸಿ, ಲಭ್ಯವಾದ ಕೂಡಲೇ ಫಲಾನುಭವಿಗಳಿಗೆ ವಿತರಣೆ ಆರಂಭಿಸುವಂತೆ ಇಲಾಖೆ ತಾಕೀತು ಮಾಡಿದೆ. ದಾಸ್ತಾನು ಪೂರ್ಣವಾಗಿ ವಿತರಣೆ ಆಗುವವರೆಗೆ ಪಡಿತರ ವಿತರಣೆ ಮುಂದುವರಿಸಬೇಕೆಂದು ಸೂಚಿಸಲಾಗಿದೆ.
ಕಳ್ಳಾಟಕ್ಕೆ ಬ್ರೇಕ್
ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ಸಮಯ ಪಾಲಿಸದೆ ಅಂಗಡಿಗಳನ್ನು ತಡವಾಗಿ ತೆರೆಯುವುದು, ಬೇಗ ಮುಚ್ಚುವುದು ಹಾಗೂ ಪಡಿತರ ಲಭ್ಯವಿಲ್ಲ ಎಂದು ಫಲಾನುಭವಿಗಳನ್ನು ಹಿಂದಿರುಗಿಸುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ನಿಯಮಾನುಸಾರ ದಿನಕ್ಕೆ ಎಂಟು ಗಂಟೆಗಳ ಕಾಲ ಪಡಿತರ ವಿತರಣೆ ಕಡ್ಡಾಯವಾಗಿದ್ದರೂ, ಕೆಲವು ಕಡೆಗಳಲ್ಲಿ ಇದನ್ನು ಪಾಲಿಸಲಾಗುತ್ತಿರಲಿಲ್ಲ ಎಂಬ ಆರೋಪವೂ ಇತ್ತು.
ಈ ಹಿನ್ನೆಲೆಯಲ್ಲಿ ಕಾರ್ಯಾವಧಿಯನ್ನು ವಿಸ್ತರಿಸಿರುವ ಆಹಾರ ಇಲಾಖೆ, ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಪಡಿತರ ವಿತರಣೆ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸುವ ಜೊತೆಗೆ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶ ಹೊಂದಿದೆ. ಇದರಿಂದ ಸಾರ್ವಜನಿಕರಿಗೆ ಪಡಿತರ ಪಡೆಯಲು ಹೆಚ್ಚಿನ ಸಮಯ ಲಭ್ಯವಾಗಲಿದ್ದು, ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚುವ ನಿರೀಕ್ಷೆಯಿದೆ.















