ಬೆಂಗಳೂರು : ಕಾಲೇಜಿನ ಸಹಪಾಠಿಗೆ ಇನ್‌ಸ್ಟಾಗ್ರಾಂನಲ್ಲಿ “ಪ್ರಿಟಿ” ಮತ್ತು “ಬ್ಯೂಟಿಫುಲ್“ ಎಂದು ಮೆಸೇಜ್ ಕಳುಹಿಸಿದ್ದ ವಿದ್ಯಾರ್ಥಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಯುವಜನರ ನಡುವಿನ ಖಾಸಗಿ ಸಂಭಾಷಣೆಯನ್ನು ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿದ್ಯಾರ್ಥಿ ಥಾಮಸ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಪಡಿಸಿ, ತನಿಖೆ ವೇಳೆ ವಶಪಡಿಸಿಕೊಳ್ಳಲಾಗಿದ್ದ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಅನ್ನು ಹಿಂದಿರುಗಿಸುವಂತೆ ಆದೇಶಿಸಿದೆ.
‘ಜೆನ್ Z’ ಶೈಲಿಯ ಸಂಭಾಷಣೆ ಅಪರಾಧವಲ್ಲ
ತೀರ್ಪಿನಲ್ಲಿ ನ್ಯಾಯಾಲಯ, “ಜೆನ್ Z ಶೈಲಿಯಲ್ಲಿ ನಡೆದ ಖಾಸಗಿ ಸಂಭಾಷಣೆಯನ್ನು ಮಾತ್ರ ಆಧರಿಸಿ ಮಾನಸಿಕ ಕಿರುಕುಳ ಅಥವಾ ಮಹಿಳೆಯ ಮೇಲಿನ ದೌರ್ಜನ್ಯ ಎಂದು ಪರಿಗಣಿಸಲಾಗುವುದಿಲ್ಲ. ಯುವಜನರ ನಡುವಿನ ಇಂತಹ ವೈಯಕ್ತಿಕ ಸಂವಹನವನ್ನು ಅಪರಾಧೀಕರಿಸುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟಿದೆ.
ಕೇವಲ ಒಂದು ಖಾಸಗಿ ಚಾಟ್ ಅನ್ನು ಆಧಾರವಾಗಿಸಿಕೊಂಡು ಕ್ರಿಮಿನಲ್ ಪ್ರಕರಣ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗುವುದಲ್ಲದೆ, ವಿದ್ಯಾರ್ಥಿಯ ಭವಿಷ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದು ನ್ಯಾಯಪೀಠ ಎಚ್ಚರಿಸಿದೆ.
ಪ್ರಕರಣದ ಹಿನ್ನೆಲೆ
20 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ 21 ವರ್ಷದ ಸಹಪಾಠಿಯ ಇನ್‌ಸ್ಟಾಗ್ರಾಂ ಫೋಟೋಗೆ “Pretty” ಮತ್ತು “Beautiful” ಎಂದು ಸಂದೇಶ ಕಳುಹಿಸಿದ್ದ. ಆರಂಭದಲ್ಲಿ ಯುವತಿ “Thanks” ಎಂದು ಪ್ರತಿಕ್ರಿಯಿಸಿದ್ದಳು. ಬಳಿಕ ಈ ಚಾಟ್ ಆಕೆಯ ತಂದೆಯ ಗಮನಕ್ಕೆ ಬಂದಿದ್ದು, ಅವರು ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ವಿರುದ್ಧ ದೂರು ದಾಖಲಾಗಿತ್ತು.
ದೂರಿನ ಆಧಾರದಲ್ಲಿ ವಿದ್ಯಾರ್ಥಿಯ ವಿರುದ್ಧ ಮಹಿಳೆಯನ್ನು ಹಿಂಬಾಲಿಸಿದ ಆರೋಪ ಸೇರಿದಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66E ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ವೇಳೆ ವಿದ್ಯಾರ್ಥಿಯ ಮೊಬೈಲ್ ಮತ್ತು ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿ ಹೈಕೋರ್ಟ್ ಮೊರೆ ಹೋಗಿದ್ದನು. ಇದೀಗ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ವಿದ್ಯಾರ್ಥಿಗೆ ಮಹತ್ವದ ರಿಲೀಫ್ ನೀಡಿದೆ.















