ನವದೆಹಲಿ: ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ ಘಟನೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕನ್ನಡ ನಟ ಯುವ ರಾಜ್‌ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು, “ಇದಕ್ಕೆಲ್ಲಾ ಯಾರು ಹೊಣೆ?” ಎಂದು ಪ್ರಶ್ನಿಸಿದ್ದಾರೆ.
ಸಿಜೆಪಿ ನೇತೃತ್ವದಲ್ಲಿ ಸೋಮವಾರ (ಜು. 20) ನಡೆದ ಪ್ರತಿಭಟನೆಯಲ್ಲಿ ಸಾವಿರಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು. ಪ್ರತಿಭಟನೆಯ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಹಲವರು ಗಾಯಗೊಂಡಿರುವ ವರದಿಗಳ ನಡುವೆ ಈ ಘಟನೆ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಯುವ ರಾಜ್‌ಕುಮಾರ್, “ರಾಜಕೀಯಕ್ಕಿಂತ ಮಾನವೀಯತೆ ದೊಡ್ಡದು. ಪ್ರಚಾರಕ್ಕಿಂತ ಸತ್ಯ ದೊಡ್ಡದು. ಭಯಕ್ಕಿಂತ ಧ್ವನಿ ದೊಡ್ಡದು. ಈ ಪೋಸ್ಟ್ ಯಾವುದೇ ರಾಜಕೀಯ ಪಕ್ಷದ ಪರವೂ ಅಲ್ಲ, ವಿರೋಧವೂ ಅಲ್ಲ; ಇದು ಮಾನವೀಯತೆಯ ಬಗ್ಗೆ. ದೇಶದ ಮೂಲೆಮೂಲೆಗಳಿಂದ ವಿದ್ಯಾರ್ಥಿಗಳು ಒಂದೇ ವಿಚಾರಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ. ಅವರ ಧ್ವನಿಯನ್ನು ಕೇಳುವುದು ಹಾಗೂ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ನಮ್ಮ ಜವಾಬ್ದಾರಿ” ಎಂದು ಹೇಳಿದ್ದಾರೆ.
ಮುಂದುವರಿದು, “ಈ ಪರಿಸ್ಥಿತಿ ತಪ್ಪಿಸಬಹುದಿತ್ತೇ? ವಿದ್ಯಾರ್ಥಿಗಳಿಗೆ ಗಾಯಗಳಾಗಲು ಕಾರಣವೇನು? ಇಂತಹ ಘಟನೆಗಳು ಮರುಕಳಿಸದಂತೆ ಏನು ಮಾಡಬೇಕು? ಪ್ರತಿಯೊಬ್ಬ ನಾಗರಿಕರೂ ಸತ್ಯಾಂಶಗಳನ್ನು ತಿಳಿದುಕೊಂಡು, ನೆಲಮಟ್ಟದ ಧ್ವನಿಯನ್ನು ಆಲಿಸಿ, ತಮ್ಮದೇ ಆದ ಅಭಿಪ್ರಾಯ ರೂಪಿಸಿಕೊಳ್ಳಬೇಕು. ಮಾನವೀಯತೆ ಮತ್ತು ಹೊಣೆಗಾರಿಕೆಯ ಪರವಾಗಿ ನಿಲ್ಲುವ ಸಮಾಜವೇ ಬಲಿಷ್ಠ ರಾಷ್ಟ್ರವನ್ನು ನಿರ್ಮಿಸುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಘಟನೆಯನ್ನು ಬಾಲಿವುಡ್ ನಟರಾದ ರಿತೇಶ್ ದೇಶ್ಮುಖ್, ಜೆನೆಲಿಯಾ ಡಿಸೂಜಾ, ಸೋನು ಸೂದ್, ರಿಚಾ ಚಡ್ಡಾ ಹಾಗೂ ಹುಮಾ ಖುರೇಷಿ ಸೇರಿದಂತೆ ಹಲವು ಸಿನಿತಾರೆಯರು ಕೂಡ ಖಂಡಿಸಿದ್ದಾರೆ. ವಿದ್ಯಾರ್ಥಿಗಳ ಹೋರಾಟಕ್ಕೆ ಚಿತ್ರರಂಗದ ಗಣ್ಯರು ಬೆಂಬಲ ವ್ಯಕ್ತಪಡಿಸುತ್ತಿರುವುದು ಚಳವಳಿಗೆ ಮತ್ತಷ್ಟು ಬಲ ತುಂಬಿದಂತಾಗಿದೆ.















