ಭೀಮ, ಶ್ರೀಕಂಠ, ಹರ್ಷನಿಗೆ ಮದ: ಅರಣ್ಯ ಇಲಾಖೆಗೆ ಪರ್ಯಾಯ ಆಯ್ಕೆಯ ಕಗ್ಗಂಟು ಮೈಸೂರು: ದಸರಾ ಗಜಪಡೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ‘ಭೀಮ’ ಸೇರಿದಂತೆ ಮೂರು ಗಂಡಾನೆಗಳಿಗೆ ಸದ್ಯ ಮದವೇರಿದೆ. ಹಾಗಾಗಿ ದಸಾರ ಮಹೋತ್ಸವಕ್ಕೆ ಆನೆಗಳ ಆಯ್ಕೆಯೇ ಅರಣ್ಯ ಇಲಾಖೆಗೆ ಕಗ್ಗಂಟಾಗಿದೆ.
ದಸರೆಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯನ್ನು ಆಗಸ್ಟ್ 26ರಂದು ಮೈಸೂರಿಗೆ ಕರೆತರಲು ಅರಣ್ಯ ಇಲಾಖೆಯು ಸಿದ್ಧತೆ ನಡೆಸಿದೆ. ಸದ್ಯ ಆನೆಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಆಗಸ್ಟ್ ಮೊದಲ ವಾರದಲ್ಲಿ ಪಟ್ಟಿ ಅಂತಿಮಗೊಳ್ಳಲಿದೆ.
ಈ ನಡುವೆ ಕೆಲವು ಗಂಡಾನೆಗಳಲ್ಲಿ ಮದ ಕಾಣಿಸಿಕೊಳ್ಳುತ್ತಿದ್ದು ಅರಣ್ಯ ಇಲಾಖೆಯು ಪರ್ಯಾಯ ಆನೆಗಳಿಗಾಗಿ ಬೇರೆ ಶಿಬಿರಗಳತ್ತ ಚಿತ್ತ ಹರಿಸಿದೆ.
ಎಲ್ಲರ ನೆಚ್ಚಿನ ‘ಭೀಮ’ ಈಗಾಗಲೇ ಪ್ರೌಢಾವಸ್ಥೆ ತಲುಪಿದ್ದು ತಿಂಗಳುಗಳ ಅಂತರದಲ್ಲೇ ಎರಡು ಬಾರಿ ಮದವೇರಿದ್ದಾನೆ ಎನ್ನಲಾಗಿದೆ. ಇದರಿಂದ ಸಹಜವಾಗಿಯೇ ಅದರ ಸ್ವಭಾವ ಹಾಗೂ ವರ್ತನೆಗಳಲ್ಲಿ ಬದಲಾವಣೆ ಆಗಿದೆ. ತುಸು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದು, ಮತ್ತಿಗೋಡು ಆನೆ ಶಿಬಿರದ ಸಿಬ್ಬಂದಿ ಇದರ ಚಲನವಲನಗಳ ಮೇಲೆ ನಿಗಾ ವಹಿಸಿದ್ದಾರೆ. ಅದೇ ಶಿಬಿರದಲ್ಲಿರುವ ಶ್ರೀಕಂಠನಿಗೂ ಮದವೇರಿದೆ ಎನ್ನಲಾಗಿದೆ. ಕಳೆದ ವರ್ಷವಷ್ಟೇ ಪಟ್ಟದ ಆನೆಯ ಅವಕಾಶ ಗಿಟ್ಟಿಸಿಕೊಂಡು ಎಲ್ಲರ ಗಮನ ಸೆಳೆದಿದ್ದ ಈ ಆನೆಯು ದಶಕದ ನಂತರದ ಉನ್ಮಾದದ ಸ್ಥಿತಿಯಲ್ಲಿದೆ. ದುಬಾರೆ ಶಿಬಿರದಲ್ಲಿರುವ ಗಜಪಡೆಯ ಹಿರಿಯ ಸದಸ್ಯ ‘ಹರ್ಷ’ನಿಗೂ ಮದ ಬಂದಿದೆ.
ಈ ಬಾರಿ ದಸರಾದಲ್ಲಿ ಪಾಲ್ಗೊಳ್ಳಲಿರುವ ಸಂಭಾವ್ಯ ಆನೆಗಳಿಗೆ ಈಚೆಗಷ್ಟೇ ಇಸಿಜಿ ಸೇರಿದಂತೆ ಹಲವು ತಪಾಸಣೆಗಳನ್ನು ನಡೆಸಲಾಗಿತ್ತು. ಆದರೆ ಈ ಮೂರು ಆನೆಗಳ ಹತ್ತಿರವೂ ವೈದ್ಯರ ತಂಡ ಸುಳಿದಿಲ್ಲ. ಸದ್ಯ ಈ ಆನೆಗಳಿಗೆ ದೇಹ ತಂಪಾಗಿಸುವ ಆಹಾರಗಳನ್ನು ನೀಡಲಾಗುತ್ತಿದೆ. ಒಂದೊಮ್ಮೆ ಈ ಆನೆಗಳ ಮದ ಇಳಿದಲ್ಲಿ ಮಾತ್ರ ಅವುಗಳನ್ನು ದಸರೆಗೆ ಕರೆತರುವ ಪ್ರಯತ್ನ ನಡೆಯಲಿದೆ.
ಈ ಬಾರಿಯ ದಸರಾ ಮಹೋತ್ಸವವು ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿದೆ. ಸಾಮಾನ್ಯವಾಗಿ ದಸರೆ ಆರಂಭಕ್ಕೆ 55-60 ದಿನಗಳ ಮುನ್ನವೇ ಆನೆಗಳನ್ನು ಮೈಸೂರಿಗೆ ಕರೆತಂದು ತಾಲೀಮು ನಡೆಸಲಾಗುತ್ತದೆ. 3 ಕಿ.ಮೀ. ದೂರದಿಂದಲೇ ಬರುತ್ತೆ ವಾಸನೆ!
ಆನೆಗಳ ಕಿವಿ ಮತ್ತು ಕಣ್ಣಿನ ನಡುವೆ ಸಣ್ಣದೊಂದು ಗ್ರಂಥಿ ಇರುತ್ತದೆ. ಅಲ್ಲಿಂದ ದ್ರವ ಸುರಿಯಲು ಆರಂಭಿಸಿ ಕೆಟ್ಟ ವಾಸನೆ ಬಂತೆಂದರೆ ಆನೆ ಮದವೇರುತ್ತಿದೆ ಎಂದರ್ಥ. 3-4 ಕಿಲೋಮೀಟರ್ ದೂರದವರೆಗೂ ಇದರ ವಾಸನೆ ಆವರಿಸಿರುತ್ತದೆ ಎನ್ನುತ್ತಾರೆ ನಿವೃತ್ತ ಪಶು ವೈದ್ಯಾಧಿಕಾರಿ ನಾಗರಾಜು. 15ನೇ ವಯಸ್ಸಿನಿಂದ ಆರಂಭಗೊಂಡು 70-80 ವರ್ಷದವರೆಗೂ ಆನೆಗಳಿಗೆ ಮದ ಬರುತ್ತಲೇ ಇರುತ್ತದೆ. ಇಂತಿಷ್ಟೇ ದಿನಕ್ಕೆ ಬರುತ್ತದೆ ಎಂದು ಹೇಳಲಾಗದು. ಅವುಗಳ ಆಹಾರ ಪರಿಸರ ಹಾಗೂ ದೈಹಿಕ ಕ್ಷಮತೆ ಮೇಲೆ ಅದು ನಿರ್ಧಾರ ಆಗುತ್ತದೆ. ಒಮ್ಮೆ ಮದ ಬಂದರೆ 2-3 ತಿಂಗಳು ಇರುತ್ತದೆ. ಅಪರೂಪದ ಸಂದರ್ಭಗಳಲ್ಲಿ ವರ್ಷ ಪೂರ್ತಿಯೂ ಆನೆ ಮದದಲ್ಲಿ ಇರುವುದು ಉಂಟು. ಈ ಸಂದರ್ಭ ಅವುಗಳ ವರ್ತನೆಯಲ್ಲಿ ಬದಲಾವಣೆ ಆಗಲಿದ್ದು ಉಗ್ರವಾಗಿರುತ್ತವೆ. ಅವುಗಳ ಹತ್ತಿರ ಸುಳಿಯಲು ಆಗದು ಎಂದು ವರು ಮಾಹಿತಿ ನೀಡಿದರು.















