ಬಾರ್ಕೂರು ಭಾರತದ ಸಂಸ್ಕೃತಿಯ ಪ್ರತಿಬಿಂಬ: ಸಚಿವ ಯು.ಟಿ. ಖಾದರ್

ಉಡುಪಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಮಂಗಳವಾರ ಬಾರ್ಕೂರಿನ ಸಂತೆಗುಡ್ಡೆಯ ಮಾಲೀಕ್ ದಿನಾರ್ ಜುಮ್ಮಾ ಮಸೀದಿಗೆ ಭೇಟಿ ನೀಡಿ, ಮಸೀದಿಯ ಆಡಳಿತ ಸಮಿತಿಯಿಂದ ಸನ್ಮಾನ ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಅವರು, ಬಾರ್ಕೂರು ಇತಿಹಾಸ ಪ್ರಸಿದ್ಧ ಪವಿತ್ರ ಕ್ಷೇತ್ರವಾಗಿದ್ದು, ವಿಜಯನಗರ ಸಾಮ್ರಾಜ್ಯದ ರಾಜರಿಂದ ಹಿಡಿದು ಅನೇಕ ಅರಸರ ಆಡಳಿತಕ್ಕೆ ಸಾಕ್ಷಿಯಾಗಿದೆ. ಅಧಿಕಾರ ಮತ್ತು ಆಡಳಿತ ಬದಲಾದರೂ ಇಲ್ಲಿನ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳನ್ನು ಉಳಿಸಿಕೊಂಡು ಬಂದಿರುವುದು ಸಮಾಜಕ್ಕೆ ಸಿಕ್ಕಿರುವ ದೊಡ್ಡ ಕೊಡುಗೆಯಾಗಿದೆ ಎಂದು ಹೇಳಿದರು.

ರಾಜ್ಯದಲ್ಲೇ ಅತ್ಯಂತ ಪ್ರಾಚೀನ ಪವಿತ್ರ ಜುಮ್ಮಾ ಮಸೀದಿ, ಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಸೈಂಟ್ ಪೀಟರ್ ಚರ್ಚ್ ಬಾರ್ಕೂರಿನಲ್ಲಿ ಅನಾದಿಕಾಲದಿಂದ ಅಸ್ತಿತ್ವದಲ್ಲಿವೆ. ವಿವಿಧ ಧರ್ಮಗಳ ಆರಾಧನಾ ಕೇಂದ್ರಗಳು ಒಂದೇ ಪ್ರದೇಶದಲ್ಲಿ ಸಹಬಾಳ್ವೆಯ ಸಂದೇಶ ಸಾರುತ್ತಿರುವ ಬಾರ್ಕೂರು, ಭಾರತದ ಸಂಸ್ಕೃತಿಯ ಪ್ರತಿಬಿಂಬವಾಗಿದೆ ಎಂದು ಖಾದರ್ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಬಾರ್ಕೂರು ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಕಾರ್ಯಾಧ್ಯಕ್ಷ ಬಿ. ಶಾಂತಾರಾಮ ಶೆಟ್ಟಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.