ಟೈಮಿಂಗ್ ವಿಚಾರಕ್ಕೆ ಬಸ್‌ನಲ್ಲೇ ರಾಡ್ ಹಿಡಿದು ಮಾರಾಮಾರಿ; ಸುಮೋಟೋ ಪ್ರಕರಣ ದಾಖಲು

ಉಪ್ಪಿನಂಗಡಿ: ಖಾಸಗಿ ಬಸ್‌ಗಳ ಟೈಮಿಂಗ್ ವಿಚಾರದಲ್ಲಿ ಆರಂಭವಾದ ವಾಗ್ವಾದ, ಪ್ರಯಾಣಿಕರ ಸಮ್ಮುಖದಲ್ಲೇ ಬಸ್‌ನೊಳಗೆ ಮಾರಾಮಾರಿಗೆ ತಿರುಗಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು, ಇಬ್ಬರು ಖಾಸಗಿ ಬಸ್‌ ನಿರ್ವಾಹಕರ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

ಜುಲೈ 14ರಂದು ಉಪ್ಪಿನಂಗಡಿಯಿಂದ ಮಂಗಳೂರಿಗೆ ಸಂಚರಿಸುವ ಅರಫಾ ಮತ್ತು ಲಕ್ಷ್ಮೀ ಬಸ್‌ಗಳ ನಿರ್ವಾಹಕರ ನಡುವೆ ಸಂಜೆ ವೇಳೆಯ ಟೈಮಿಂಗ್ ವಿಚಾರವಾಗಿ ಜಗಳ ಉಂಟಾಗಿದೆ. ಈ ವೇಳೆ ಅರಫಾ ಬಸ್‌ನ ನಿರ್ವಾಹಕ ನೌಶಾದ್ ಕಬ್ಬಿಣದ ರಾಡ್ ಹಿಡಿದು ಪ್ರಯಾಣಿಕರು ಕುಳಿತಿದ್ದ ಲಕ್ಷ್ಮೀ ಬಸ್‌ನೊಳಗೆ ನುಗ್ಗಿ, ಅದರ ನಿರ್ವಾಹಕ ಖಲಂದರ್ ಅಲಿಯಾಸ್ ಶಾಹೀದ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಘಟನೆ ವೇಳೆ ಶಾಹೀದ್ ಕೂಡ ನೌಶಾದ್ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದು, ಇಬ್ಬರಿಗೂ ಗಾಯಗಳಾಗಿವೆ. ಬಳಿಕ ಇಬ್ಬರೂ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೂ, ಯಾರೂ ಪೊಲೀಸರಿಗೆ ದೂರು ನೀಡಿರಲಿಲ್ಲ.

ಆದರೆ, ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ಬಸ್‌ನೊಳಗೆ ಇದ್ದಾಗಲೇ ಮಾರಕಾಸ್ತ್ರದೊಂದಿಗೆ ಬಸ್‌ಗೆ ನುಗ್ಗಿ ಹಲ್ಲೆ ನಡೆಸಿರುವುದು ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡಿದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ಸ್ವಯಂಪ್ರೇರಿತ (ಸುಮೋಟೋ) ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆ ಕುರಿತು ತನಿಖೆ ಮುಂದುವರಿಸಿದ್ದಾರೆ.