ಕುಂದಾಪುರ: ಆ ಊರಲ್ಲಿ ಎಲ್ಲಿ ಬಾವಿ ತೋಡಿದರೂ ಶುದ್ದ ನೀರು ಸಿಗೋದೆ ಇಲ್ಲ. ಎಲ್ಲರ ಮನೆಯ ಬಾವಿ ನೀರು ಉಪ್ಪು. ಪಂಚಾಯತ್ ಬಿಡುವ ನಳ್ಳಿ ನೀರನ್ನೇ ಅವಲಂಭಿಸಿರುವ ಆ ಊರಿನ ಜನರಿಗೆ ಇದೀಗ ಸಂಕಷ್ಟ ಎದುರಾಗಿದೆ. ಶುದ್ದ ನೀರು ಬಿಡುತ್ತಿದ್ದ ಪಂಚಾಯತ್ ಇದೀಗ ಕೊಳಚೆ ಮಿಶ್ರಿತ ಉಪ್ಪು ನೀರನ್ನು ಬಿಟ್ಟು ಸ್ಥಳೀಯರ ನೆಮ್ಮದಿ ಕೆಡಿಸಿದೆ. ಅಷ್ಟಕ್ಕೂ ಆ ಊರು ಯಾವುದು ಅಂತೀರಾ? ಈ ವರದಿ ನೋಡಿ.
ನೀರು ಬೇಕಾದರೆ ಖರ್ಚು ಮಾಡಬೇಕು ಮುನ್ನೂರು !
ಈ ಬಾರಿ ವಿಪರೀತ ಮಳೆ ಬಂದರೂ ೩೦೦ ರೂ. ನೀರಿಗಾಗಿ ಖರ್ಚು ಮಾಡಬೇಕಾಗಿದೆ. ಕಳೆದ ಒಂದು ತಿಂಗಳುಗಳಿಂದ ಕುಡಿಯುವ ನೀರಿಲ್ಲದೆ ಸಾರ್ವಜನಿಕರು ಕಣ್ಣೀರಾಗಿದ್ದಾರೆ. ಸರ್ಕಾರ ತುರ್ತು ಕುಡಿಯುವ ನೀರಿಗೆ ಆಧ್ಯತೆ ನೀಡಬೇಕು. ಯಾವುದೇ ಮೂಲದ ಅನುದಾನವಾದರೂ ಪರವಾಗಿಲ್ಲ ಬಳಸಿಕೊಂಡು ನೀರು ಒದಗಿಸಬೇಕು ಎನ್ನುತ್ತದೆ. ನೀರಿನ ಸಮಸ್ಯೆ ಗೊತ್ತಿದ್ದರೂ ಗ್ರಾಮ ಪಂಚಾಯಿತಿ ಮಾತ್ರ ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಕುಡಿಯಲು, ಸಾಕು ಪ್ರಾಣಿಗಳಿಗೆ, ನಿತ್ಯಬಳಕೆಗೆ ಹಣ ಕೊಟ್ಟು ಟ್ಯಾಂಕರ್ ಮೂಲಕ ನೀರು ಪಡೆಯುವ ಸಂದಿಗ್ದತೆಗೆ ಪರಿಸರ ವಾಸಿಗಳು ಒಳಗಾಗಿದ್ದಾರೆ.
ಕಳೆದ ಒಂದು ತಿಂಗಳುಗಳಿಂದ ಇದೇ ಸಮಸ್ಯೆ ಎದುರಿಸುತ್ತಿದ್ದ ಜನರು ಪಂಚಾಯತ್ ನಿರ್ಲಕ್ಷ್ಯದ ವಿರುದ್ದ ಪ್ರತಿಭಟನೆಗೆ ಮುಂದಾಗಿದ್ದು, ಕೊಳಚೆ ನೀರನ್ನು ಪೂರೈಸುತ್ತಿರುವ ಹೆಮ್ಮಾಡಿ ಪಂಚಾಯತ್ ವಿರುದ್ದ ಮಂಗಳವಾರ ಇಲ್ಲಿನ ಹುಣ್ಸೆಬೆಟ್ಟು ಹಾಗೂ ಪತಿಬೆಟ್ಟು ಗ್ರಾಮಸ್ಥರು ಪಂಚಾಯತ್ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಪಂಚಾಯತ್ ನಳ್ಳಿಯಲ್ಲಿ ಬರುತ್ತಿರುವ ಕೊಳಚೆ ನೀರನ್ನು ಕೊಡಪಾನ ಹಾಗೂ ಬಾಟಲಿಗಳಲ್ಲಿ ತಂದಿರಿಸಿ ಲೋಟದ ಮೂಲಕ ಪಿಡಿಓ ಹಾಗೂ ಜನಪ್ರತಿನಿಧಿಗಳಿಗೆ ಕುಡಿಯಲು ಒತ್ತಾಯಿಸುವ ಮೂಲಕ ವಿನೂತನ ಪ್ರತಿಭಟನೆಗೆ ಮುಂದಾಗಿದ್ದಾರೆ.
ಹುಣ್ಸೆಬೆಟ್ಟು, ಪತಿಬೆಟ್ಟುವಿನಲ್ಲಿ ಸಮಸ್ಯೆ ಗಂಭೀರ:
ಬೈಂದೂರು ವಿಧಾನಸಭಾ ಕ್ಷೇತ್ರದ ಹೆಮ್ಮಾಡಿ ಗ್ರಾಮ ಪಂಚಾಯಿತಿಯ ಕಟ್ಟು, ಮೂವತ್ತುಮುಡಿ, ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಪರಿಸರ, ಕನ್ನಡಕುದ್ರು, ಬುಗ್ರಿಕಡು, ಹುಣ್ಸೆಬೆಟ್ಟು, ಪತಿಬೆಟ್ಟು ನಿವಾಸಿಗಳು ನೀರಿಗಾಗಿ ನಿಟ್ಟುಸಿರು ಬಿಡುತ್ತಿದ್ದಾರೆ. ಹುಣ್ಸೆಬೆಟ್ಟು, ಪತಿಬೆಟ್ಟುವಿನಲ್ಲಿ ಈ ಬಗ್ಗೆ ಗಂಭೀರ ಸಮಸ್ಯೆ ತಲೆದೋರಿದ್ದು, ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ಗೋಗರೆದು ಕಣ್ಣೀರಿಟ್ಟಿದ್ದಾರೆ.
ಆದರೆ ನೀರು ಮಾತ್ರ ಇನ್ನೂ ಸಿಕ್ಕಿಲ್ಲ. ಶ್ರೀ ಲಕ್ಷ್ಮೀನಾರಾಯಣ ಪರಿಸರ ಹೊರತುಪಡಿಸಿ, ಕಟ್ಟು, ಮುವತ್ತುಮುಡಿ, ಕನ್ನಡಕುದ್ರು ಚಕ್ರಾನದಿ ದಂಡೆ ಮೇಲಿದೆ. ಕನ್ನಡಕುದ್ರು ಕುದ್ರಾದರೆ, ಕಟ್ಟು, ಮುವತ್ತುಮುಡಿ ಚಕ್ರಾ ನದಿಯ ಸಾಲಿನಲ್ಲಿ ಇದೆ. ನದಿ ನೀರು ಉಪ್ಪಾಗುವುದರಿಂದ ನೀರು ಜಾನುವಾರು ಕೂಡಾ ಕುಡಿಯುವುದಕ್ಕೂ ಆಗದಷ್ಟು ಕೆಟ್ಟದಾಗಿದೆ. ಕಟ್ಟು ಹಾಗೂ ಲಕ್ಷ್ಮೀನಾರಾಯಣ ದೇವಸ್ಥಾನ ಪರಿಸರ ವಾಸಿಗಳು ನಳ್ಳಿ ನೀರನ್ನೇ ನೆಚ್ಚಿಕೊಂಡಿದ್ದಾರೆ. ಪ್ರಸಕ್ತ ನಳ್ಳಿ ತಿರುವಿದರೆ ಗಾಳಿ ಮಾತ್ರ ಬರುತ್ತಿದೆ. ಕೆಲವೊಮ್ಮೆ ನೀರು ಬಂದರೂ ಬಳಸಲು ಯೋಗ್ಯವಲ್ಲದ ಕೆಸರು ಮಿಶ್ರಿತ ಉಪ್ಪು ನೀರು. ಪಂಚಾಯತ್‌ನಿಂದ ಕೊಡುವ ನೀರಿನಲ್ಲಿ ಸ್ನಾನ ಮಾಡಿದರೆ ಕೂದಲೆಲ್ಲ ಉದುರಿ ಹೋಗುತ್ತದೆ. ಇದರಿಂದ ಈ ನೀರನ್ನು ಕುಡಿಯುವುದು ಬಿಡಿ, ಸ್ನಾನ ಮಾಡಲು ಕೂಡ ಬಳಸುವುದು ಕಷ್ಟಕರವಾಗಿದೆ.
ನೀರಿನ ಮೂಲ ಇಲ್ಲ, ಬೋರ್‌ವೆಲ್ ಕೊರೆಸಿದರೂ ಉಪ್ಪು ನೀರು:
ಹೆಮ್ಮಾಡಿ ಪಂಚಾಯತ್ ವತಿಯಿಂದ ಕಳೆದೊಂದು ವರ್ಷದಲ್ಲಿ ೪ ಬೋರ್‌ವೆಲ್‌ಗಳನ್ನು ಕೊರೆಯಿಸಿದ್ದರೂ, ಕೂಡ ಈಗ ಬಳಕೆಯಾಗುತ್ತಿರುವುದು ಕೇವಲ ೧ ಬೋರ್‌ವೆಲ್ ಮಾತ್ರ. ಆದರೆ ಆ ಒಂದು ಬೋರ್‌ವೆಲ್‌ನಲ್ಲಿರುವ ನೀರು ಕೂಡ ಈಗ ಕುಡಿಯಲು ಬಿಡಿ ದಿನಬಳಕೆಗೂ ಉಪಯೋಗಿಸಿಕೊಳ್ಳು ಯೋಗ್ಯವಿಲ್ಲ.
ಹೆಮ್ಮಾಡಿ ಗ್ರಾಮದಲ್ಲಿ ಎಲ್ಲಿ ಬೋರ್‌ವೆಲ್ ಕೊರೆಯಿಸಿದರೂ ನೀರು ಸಿಕ್ಕರೂ ಉಪ್ಪು ನೀರಿನ ಅಂಶವೇ ಜಾಸ್ತಿಯಿರುತ್ತದೆ. ಹೀಗಾಗಿ ಈ ಹಿಂದೆ ಸಮೀಪದ ಕಟ್‌ಬೆಲ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಬೋರ್‌ವೆಲ್ ಕೊರೆಸಿ ಹೆಮ್ಮಾಡಿ ಪಂಚಾಯತ್ ವ್ಯಾಪ್ತಿಗೆ ನೀರನ್ನು ಬಿಡಲಾಗಿತ್ತು. ಆದರೆ ಆ ಬೋರ್‌ವೆಲ್‌ಗೆ ಅಳವಡಿಸಿರುವ ಕೇಸಿಂಗ್ ಪೈಪ್ ತುಕ್ಕು ಹಿಡಿದಿದ್ದರಿಂದ ಇದೀಗ ನೀರಿನ ಸಮಸ್ಯೆ ತಲೆದೋರಿದೆ. ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ೯೯೦ ಮನೆಗಳಿದ್ದು, ಒಟ್ಟು ೪,೩೨೬ ಜನರಿದ್ದಾರೆ. ೬೧೦ ಮನೆಗಳಲ್ಲಿ ಸ್ವಂತ ಬಾವಿಯಿದ್ದರೂ, ಕೆಲವೇ ಕೆಲವು ಬಾವಿಗಳು ಮಾತ್ರ. ಹೆಮ್ಮಾಡಿ ಗ್ರಾಮದಲ್ಲಿ ೧೩ ಬೋರ್‌ವೆಲ್‌ಗಳಿದ್ದು, ಅದರಲ್ಲಿ ಒಂದು ಮಾತ್ರ ಪಂಚಾಯತ್ ವತಿಯಿಂದ ನೀರು ಪೂರೈಸಲಾಗುತ್ತಿದೆ. ಈ ಪೈಕಿ ಕೆಲ ಬೋರ್‌ವೆಲ್‌ಗಳು ಕೆಲ ಕಾಲೋನಿ, ವಾರ್ಡ್‌ಗಳ ಜನ ಬಳಸುತ್ತಿದ್ದಾರೆ.
ಕೊಳಚೆ ನೀರು ಹಿಡಿದು ಪಂಚಾಯಿತಿ ಮುಂದೆ ಪ್ರತಿಭಟನೆ: ಆಕ್ರೋಶ
ಪಂಚಾಯಿತಿ ನಿರ್ಲಕ್ಷ್ಯಧೋರಣೆಗೆ ಖಂಡಿಸಿ ಮಂಗಳವಾರ ಪಂಚಾಯತ್ ಎದರು ಜಮಾಯಿಸಿದ ಸಾರ್ವಜನಿಕರು ಪಂಚಾಯತ್ ಪಿಡಿಓ ಹಾಗೂ ಆಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಒಂದು ತಿಂಗಳುಗಳಿಂದ ಕೊಳೆಚೆ ನೀರು ಬಿಡಲಾಗುತ್ತಿದೆ. ಇನ್ನೂ ಬೇಸಿಗೆಗಾಲ ಆರಂಭವಾಗಿಲ್ಲ. ಈಗಲೇ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಅಂದಮೇಲೆ ಬೇಸಿಗೆಯಲ್ಲಿ ನಮ್ಮ ಕತೆ ಏನು. ಇಷ್ಟೊಂದು ಗಂಭೀರವಾದ ಸಮಸ್ಯೆ ತಲೆದೋರಿದರೂ ಕೂಡ ಪಂಚಾಯತ್ ಆಡಳಿತ ನಮ್ಮ ಬಗ್ಗೆ ಕಾಳಜಿ ವಹಿಸಿಲ್ಲ. ಉಪ್ಪು ನೀರನ್ನೇ ಬಿಡುತ್ತಿದ್ದಾರೆ.
ಮನೆಯಲ್ಲಿರುವ ಬಾವಿ ನೀರು ಉಪ್ಪಾಗಿರುವುದುರಿಂದ ಪಂಚಾಯತ್ ನೀರನ್ನೇ ಅವಲಂಭಿಸಿಕೊಂಡಿದ್ದೇವೆ. ಇದೇ ನೀರನ್ನು ದಿನಬಳಕೆಗೆ ಉಪಯೋಗಿಸಿಕೊಳ್ಳುತ್ತಿದ್ದರಿಂದ ನಮ್ಮ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಇಲ್ಲಿಯತನಕವೂ ತಾಳ್ಮೆಯಿಂದ ವರ್ತಿಸಿದ್ದೇವೆ. ಆದರೆ ಶುದ್ದ ನಿರನ್ನು ಪೂರೈಸುವ ಬಗ್ಗೆ ಇಂದಿಗೂ ಪಂಚಾಯತ್ ಏನೂ ಕೆಲಸ ಮಾಡಿಲ್ಲ. ಇದೀಗ ನಮ್ಮ ತಾಳ್ಮೆಯ ಕಟ್ಟೆಯೂ ಒಡೆದಿದೆ ಎಂದು ಗ್ರಾಮಸ್ಥರು ಪಿಡಿಓ ಹಾಗೂ ಪಂಚಾಯತ್ ಆಡಳಿತದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಬಳಿಕ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದುಕೊಂಡರು. ಈ ವೇಳೆಯಲ್ಲಿ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ, ಉಪಾಧ್ಯಕ್ಷ ಅಂತೋನಿ ಲೂವಿಸ್, ಸದಸ್ಯರಾದ ಆನಂದ ಪಿಎಚ್, ರಾಘವೇಂದ್ರ ಪೂಜಾರಿ, ಸಯ್ಯದ್ ಯಾಸೀನ್, ಸುಧಾಕರ್ ದೇವಾಡಿಗ, ಆಶಾ ಆನಂದ ಪೂಜಾರಿ, ಗ್ರಾಮಸ್ಥರಾದ ಚಂದ್ರ ಪೂಜಾರಿ ಪದ್ಮಶ್ರೀ, ರಾಜು ಪೂಜಾರಿ ಹುಣ್ಸೆಬೆಟ್ಟು, ಗುರುರಾಜ್ ಪೂಜಾರಿ, ದೀಪಕ್, ಪ್ರಸನ್ನ, ಸುನೀಲ್ ಮೊದಲಾದವರು ಇದ್ದರು.












