ದಿಡುಪೆ ಜಲಪಾತದಲ್ಲಿ ಸ್ಥಳೀಯ ಯುವಕರಿಂದ ನೈತಿಕ ಪೊಲೀಸ್ ಗಿರಿ, ಐವರ ವಿರುದ್ಧ ಎಫ್‌ಐಆರ್‌ ದಾಖಲು

ಬೆಳ್ತಂಗಡಿ: ದಿಡುಪೆ ಜಲಪಾತದಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಐವರು ಸೇರಿದಂತೆ ಇತರ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಂಗಳೂರಿನಿಂದ ಸ್ನೇಹಿತನೊಂದಿಗೆ ಜುಲೈ 12ರಂದು ದಿಡುಪೆ ಜಲಪಾತ ವೀಕ್ಷಣೆಗೆ ಬಂದಿದ್ದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ದಿಡುಪೆ ನಿವಾಸಿಗಳಾದ ರಂಜಿತ್, ಸುದರ್ಶನ್, ಸ್ವಸ್ತಿಕ್, ಪ್ರದೀಪ್, ದೀಕ್ಷಿತ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಯುವತಿ ಮತ್ತು ಆಕೆಯ ಸ್ನೇಹಿತ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ನಲ್ಲಿ ಅನುಮತಿ ಪಡೆದು ಜಲಪಾತಕ್ಕೆ ಭೇಟಿ ನೀಡಿ ಹಿಂತಿರುಗುವ ವೇಳೆ, ಸ್ಥಳೀಯ ಯುವಕರ ತಂಡ ಅವರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದೆ ಎಂದು ಆರೋಪಿಸಲಾಗಿದೆ.

ಯುವತಿಯ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್‌ 126(2), 352 ಹಾಗೂ 351(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.