ಕುಂದಾಪುರ: ಹೆಬ್ರಿ ತಾಲ್ಲೂಕು ಘೋಷಣೆ ಆಗುವ ಮೊದಲೇ ಬ್ರಹ್ಮಾವರ ತಾಲ್ಲೂಕು ಘೋಷಣೆಯಾಗಿದ್ದರೂ ಕೂಡ ಮಿನಿ ವಿಧಾನಸೌಧದ ಕನಸು ನನಸಾಗದೇ ಇರುವುದು ಪ್ರಸ್ತುತ ಶಾಸಕ ಕೆ. ರಘುಪತಿ ಭಟ್ ಅವರ ವೈಫಲ್ಯಕ್ಕೆ ಸಾಕ್ಷಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆರೋಪಿಸಿದರು.
ಅವರು ಮಂಗಳವಾರ ಬ್ರಹ್ಮಾವರದ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅವಧಿಯಲ್ಲಿ ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಂದ ಬ್ರಹ್ಮಾವರ ತಾಲ್ಲೂಕು ಉದ್ಘಾಟನೆಯಾಗಿತ್ತು. ಮಿನಿ ವಿಧಾನ ಸೌಧಕ್ಕಾಗಿ ಹಳೆ ಐಬಿ ಬಳಿ 3.38 ಎಕರೆ ಜಾಗವನ್ನೂ ಗುರುತಿಸಲಾಗಿತ್ತು. ಆದರೆ ಇದುವರೆಗೆ ಅನುದಾನ ಮಾತ್ರ ಬಿಡುಗಡೆಗೊಂಡಿಲ್ಲ ಎಂದರು.
ಬ್ರಹ್ಮಾವರ ತಾಲ್ಲೂಕು ಅತೀ ಹೆಚ್ಚಿನ ಗ್ರಾಮ, ಜನಸಂಖ್ಯೆ ಹಾಗೂ ಪಹಣಿ ಪತ್ರವನ್ನು ಹೊಂದಿದೆ. ಬಹಳಷ್ಟು ಹಿಂದೆಯೇ ವಿಶೇಷ ತಹಶೀಲ್ದಾರರ ನೇಮಕವಾಗಿದೆ. ಜಾಗದ ಲಭ್ಯತೆಯೂ ಇದೆ. ಆದರೂ ಮಿನಿ ವಿಧಾನ ಸೌಧ ನಿರ್ಮಾಣ ಪ್ರಕ್ರಿಯೆ ಆಗದಿರುವುದು ಬ್ರಹ್ಮಾವರದ ಜನತೆಗೆ ಬೇಸರ ಹಾಗೂ ಅಸಮಾಧಾನ ತಂದಿದೆ. ಈಗಾಗಲೇ ಹೆಬ್ರಿ ತಾಲೂಕಿಗೆ ಅನುದಾನ ಮಂಜೂರಾಗಿ ಶಿಲಾನ್ಯಾಸ ನೆರವೇರಿದೆ. ಕೂಡಲೇ ಬ್ರಹ್ಮಾವರದಲ್ಲೂ ಮಿನಿ ಸೌಧದ ನಿರ್ಮಾಣ ಮಾಡಲು ಹಣ ಮಂಜೂರು ಮಾಡಿ ತಕ್ಷಣ ಕಾಮಗಾರಿ ಆರಂಭಿಸುವಲ್ಲಿ ಶಾಸಕರು ಕಾರ್ಯಪ್ರವರ್ತರಾಗಲಿ ಎಂದು ಅವರು ಆಗ್ರಹಿಸಿದರು.
ಬ್ರಹ್ಮಾವರ ಪೇಟೆಯ ವಾರಂಬಳ್ಳಿ, ಚಾಂತಾರು, ಹಂದಾಡಿ ಹಾಗೂ ಹಾರಾಡಿ ಪಂಚಾಯತ್ಗಳನ್ನು ಸೇರಿಸಿ ಪುರಸಭೆ ರಚಿಸುವ ಕುರಿತು ತನ್ನ ಅವಧಿಯಲ್ಲಿ ಪ್ರಯತ್ನಿಸಲಾಗಿತ್ತು. ಆದರೆ ಸಫಲವಾಗಿರಲಿಲ್ಲ. ಆಗ ರಘುಪತಿ ಭಟ್ ಅವರು ಟೀಕಿಸಿದ್ದರು.ಈಗ ತಮ್ಮ ಅವಧಿಯಲ್ಲಾದರೂ ಪುರಸಭೆ ರಚನೆಯಾಗಿಸುವಲ್ಲಿ ಸಫಲರಾಗಬೇಕು ಎಂದು ಹೇಳಿದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಜನಾರ್ಧನ ತೋನ್ಸೆ, ಮೈರ್ಮಾಡಿ ಸುಧಾಕರ ಶೆಟ್ಟಿ, ನಿತ್ಯಾನಂದ ಶೆಟ್ಟಿ ಹಾರಾಡಿ, ಡಾ.ಸುನೀತಾ ಡಿ. ಶೆಟ್ಟಿ, ಗೋಪಿ ಕೆ. ನಾಯ್ಕ ದಿನಕರ ಹೇರೂರು, ನವೀನ್ಚಂದ್ರ ನಾಯಕ್, ವಿಮಲಾ, ಸರಸ್ವತಿ ನಾಯ್ಕ ಉಪಸ್ಥಿತರಿದ್ದರು.












