ಕುಂದಾಪುರ: ರೈತರಿಂದಲೇ ಮುಂಗಾರು ಬೆಳೆ ಸಮೀಕ್ಷೆಗೆ ಅವಕಾಶ

ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ತಂತ್ರಾoಶವನ್ನು ಅಭಿವೃದ್ಧಿಪಡಿಸಲಾಗಿರುತ್ತದೆ.

ಇಲಾಖೆಯ ಫ್ರೂಟ್ಸ್ ತಂತ್ರಾoಶದ ಎಫ್.ಐ.ಡಿ. ಸಂಖ್ಯೆಯನ್ನು ಹೊಂದಿರುವ ರೈತರು ಗೂಗಲ್ ಪ್ಲೇ ಸ್ಟೋರ್‌ನಿಂದ ಮುಂಗಾರು ರೈತರ ಬೆಳೆ ಸಮೀಕ್ಷೆ 2026-27 ತಂತ್ರಾoಶವನ್ನು ಡೌನ್‌ಲೋಡ್ ಮಾಡಿಕೊಂಡು, ಅನಂತರ ಇ-ಕೆವೈಸಿ ಮೂಲಕ ಆಧಾರ್ ದೃಢೀಕರಿಸಿ ಆಯ್ಕೆಯನ್ನು ಮಾಡಿ ಆಧಾರ್ ಸಂಖ್ಯೆಯನ್ನು ದಾಖಲಿಸಿ ಜನರೇಟ್ ಒ.ಟಿ.ಪಿ. ಆಯ್ಕೆಯನ್ನು ಮಾಡಬೇಕು.

ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಸ್ವೀಕೃತವಾಗಿರುವ ಒ.ಟಿ.ಪಿ. ಯನ್ನು ಮೊಬೈಲ್ ತಂತ್ರಾoಶದಲ್ಲಿ ದಾಖಲಿಸಬೇಕು. ರೈತರ ಎಫ್.ಐ.ಡಿ. ಸಂಖ್ಯೆಗೆ ಜೋಡಣೆಯಾಗಿರುವ ಎಲ್ಲಾ ಜಮೀನುಗಳ ಮಾಹಿತಿಯು ಡೌನ್‌ಲೋಡ್ ಆಗುತ್ತದೆ.

ಮುಂದಿನ ಹಂತದಲ್ಲಿ ಇತರ ಮಾಹಿತಿಗಳಾದ ಸರ್ವೆ ನಂಬರ್, ಹಿಸ್ಸಾ ನಂಬರ್, ಮಾಲಕನ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಬೇಕು. ಸರ್ವೇ ನಂಬರ್‌ಗಳ ಗಡಿರೇಖೆಯೊಳಗೆ ನಿಂತು ಬೆಳೆ ವಿವರವನ್ನು ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು. ಒಂದು ವೇಳೆ ರೈತರು ಎಫ್.ಐ.ಡಿ. ಸಂಖ್ಯೆಯನ್ನು ಹೊಂದಿಲ್ಲದಿದ್ದರೆ, ಹತ್ತಿರದ ಕೃಷಿ ಅಥವಾ ತೋಟಗಾರಿಕೆ ಇಲಾಖೆಗಳ ಕಛೇರಿಯನ್ನು ಸಂಪರ್ಕಿಸಿ ಎಫ್.ಐ.ಡಿ. ಮಾಡಿಸಿಕೊಳ್ಳಬಹುದು.

ಕುಂದಾಪುರ ತಾಲೂಕಿನ ರೈತರು ತಮ್ಮ ಜಮೀನಿನ ಬೆಳೆ ವಿವರವನ್ನು ಯಾವುದೇ ಲೋಪದೋಷಗಳಿಲ್ಲದೆ ನಿಗದಿತ ಅವಧಿಯೊಳಗೆ ಮೊಬೈಲ್ ತಂತ್ರಾoಶದಲ್ಲಿ ತಮ್ಮ ಜಮೀನಿನ ಸರ್ವೇ ನಂಬರ್ವಾರು ತಾವೇ ಖುದ್ದಾಗಿ ನಿಖರವಾಗಿ ದಾಖಲಿಸಿ ಮುಂಗಾರು 2026-27 ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕೆಂದು ಕುಂದಾಪುರ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕಚೇರಿ ಪ್ರಕಟಣೆ ತಿಳಿಸಿದೆ.