ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ (Civil Police Constable) ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಅವಕಾಶ ನೀಡಿದೆ. ಅರ್ಜಿ ಸಲ್ಲಿಸುವ ವೇಳೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಪ್ರಾಧಿಕಾರ ವಿಶೇಷ ‘Edit Application’ ಲಿಂಕ್ ಅನ್ನು ತೆರೆಯಿದ್ದು, ಜುಲೈ 13ರವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರ ಪ್ರಕಾರ, ಅರ್ಜಿ ಭರ್ತಿ ಮಾಡುವ ವೇಳೆ ಗಡಿಬಿಡಿ ಅಥವಾ ತಾಂತ್ರಿಕ ಕಾರಣಗಳಿಂದ ಹಲವು ಅಭ್ಯರ್ಥಿಗಳು ಮಾಹಿತಿಯಲ್ಲಿ ತಪ್ಪುಗಳನ್ನು ಮಾಡಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ‘Edit Application for the Karnataka State Police’ ಲಿಂಕ್ ಮೂಲಕ ಲಾಗಿನ್ ಆಗಿ ಅರ್ಜಿಯನ್ನು ತಿದ್ದುಪಡಿ ಮಾಡಬಹುದು. ಲಾಗಿನ್ ಮಾಡಲು ಅರ್ಜಿ ಸಂಖ್ಯೆ ಹಾಗೂ ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಿರುವಂತೆ ಜನ್ಮ ದಿನಾಂಕವನ್ನು ನಮೂದಿಸಬೇಕು. ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಯ ವಾಟ್ಸಾಪ್ಗೆ ಕಳುಹಿಸುವ ಒಟಿಪಿ ನಮೂದಿಸಿದ ನಂತರವೇ ತಿದ್ದುಪಡಿ ಪುಟ ತೆರೆದುಕೊಳ್ಳಲಿದೆ.
ಅರ್ಜಿ ತಿದ್ದುಪಡಿ ವೇಳೆ ಅಭ್ಯರ್ಥಿಗಳು ಭಾವಚಿತ್ರ ಹಾಗೂ ಸಹಿಯನ್ನು ಮರು ಅಪ್ಲೋಡ್ ಮಾಡಬಹುದಾಗಿದೆ. ಮೀಸಲಾತಿ, ವರ್ಗ ಅಥವಾ ಇತರೆ ಮಾಹಿತಿಯಲ್ಲಿ ಬದಲಾವಣೆ ಮಾಡಿದ ಪರಿಣಾಮ ಹೆಚ್ಚುವರಿ ಅರ್ಜಿ ಶುಲ್ಕ ಅನ್ವಯಿಸಿದರೆ, ಅದರ ವ್ಯತ್ಯಾಸದ ಮೊತ್ತವನ್ನು ಆನ್ಲೈನ್ ಮೂಲಕ ಪಾವತಿಸಬೇಕು. ಶುಲ್ಕ ಪಾವತಿಸಿದ ಬಳಿಕ ಪಾವತಿ ಸ್ಥಿತಿಯನ್ನು ಪರಿಶೀಲಿಸಿ, ಅಂತಿಮವಾಗಿ ತಿದ್ದುಪಡಿ ಮಾಡಿದ ಅರ್ಜಿಯ ಪ್ರಿಂಟ್ಔಟ್ ತೆಗೆದುಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ.
ಪ್ರಾಧಿಕಾರ ಸ್ಪಷ್ಟಪಡಿಸಿರುವಂತೆ, ಅರ್ಜಿ ತಿದ್ದುಪಡಿಗೆ ಒಂದು ಬಾರಿ ಮಾತ್ರ ಅವಕಾಶ ನೀಡಲಾಗಿದೆ. ಆದ್ದರಿಂದ ಎಲ್ಲ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಒಂದೇ ಬಾರಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಬಳಿಕ ಮತ್ತೊಮ್ಮೆ ತಿದ್ದುಪಡಿಗೆ ಅವಕಾಶ ಇರುವುದಿಲ್ಲ. ದಾಖಲಾತಿ ಪರಿಶೀಲನೆ ವೇಳೆ ಅಂತಿಮ ಅರ್ಜಿಯ ಮುದ್ರಿತ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿರುವುದರಿಂದ ಅಭ್ಯರ್ಥಿಗಳು ಕೊನೆಯ ದಿನದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೆಇಎ ಮನವಿ ಮಾಡಿದೆ.















