ಸೆಲ್ಫಿ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್: ಜೀನತ್ ಮತ್ತು ಗೀತಾ ರಾವ್ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಉಡುಪಿ: ಸೆಲ್ಫಿ ವಿಡಿಯೋವನ್ನು ದುರುಪಯೋಗಪಡಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹51.84 ಲಕ್ಷಕ್ಕೂ ಅಧಿಕ ಹಣ ಹಾಗೂ ಚಿನ್ನಾಭರಣ ಪಡೆದು ವಂಚನೆ ಎಸಗಿರುವ ಆರೋಪದಡಿ ಇಬ್ಬರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬನ್ನಂಜೆಯ ತೇಜೇಶ್ವ‌ರ್ ರಾವ್ ನೀಡಿದ ದೂರಿನ ಪ್ರಕಾರ, ಅವರು 2018ರಿಂದ 2022ರವರೆಗೆ ಉಡುಪಿಯ ಮಹಾಮಾಯ ಕಾಂಪ್ಲೆಕ್ಸ್‌ನಲ್ಲಿ ಮೋದಿಕೇರ್ ಸ್ಟಾಕ್ ಪಾಯಿಂಟ್ ಅಂಗಡಿಯನ್ನು ನಡೆಸುತ್ತಿದ್ದರು. ಈ ಅವಧಿಯಲ್ಲಿ ಆರೋಪಿತರಾದ ಝೀನತ್ ಹಾಗೂ ಗೀತಾರಾವ್ ಅವರ ಪರಿಚಯವಾಗಿತ್ತು.

ದೂರಿನ ಪ್ರಕಾರ, ಮೊದಲ ಆರೋಪಿತೆ ಝೀನತ್ ಮೋದಿಕೇರ್ ಕಚೇರಿಯಲ್ಲಿ ಸೆಲ್ಪಿ ತೆಗೆಯುವ ನೆಪದಲ್ಲಿ ಪಿರ್ಯಾದಿದಾರರೊಂದಿಗೆ ವಿಡಿಯೋ ಮಾಡಿಕೊಂಡಿದ್ದು, ಬಳಿಕ ಅದನ್ನು ಆಧಾರವನ್ನಾಗಿ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹಂತ ಹಂತವಾಗಿ ₹36.84 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನೋರ್ವ ಆರೋಪಿತೆ ಗೀತಾರಾವ್ ಸಹ ಇದೇ ರೀತಿಯಲ್ಲಿ ಬೆದರಿಕೆ ಒಡ್ಡಿ ₹15 ಲಕ್ಷ ಹಣ ಪಡೆದುಕೊಂಡಿರುವುದಲ್ಲದೆ, ಚಿನ್ನಾಭರಣಗಳು ಹಾಗೂ ಕೆಲವು ಖಾಲಿ ಚೆಕ್‌ಗಳನ್ನೂ ಪಡೆದು ವಂಚನೆ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ₹50 ಲಕ್ಷದ ಭರವಸೆ ನೀಡಿ 148 ಗ್ರಾಂ ಚಿನ್ನ ಪಡೆದು ವಂಚನೆ:

ಅಲ್ಪಸಂಖ್ಯಾತರ ಯೋಜನೆಯಡಿ 12 ಕೋಟಿ ಸಾಲ ಮಂಜೂರಾಗಲಿದ್ದು, ಸಾಲ ಬಂದ ಕೂಡಲೇ ಒಂದು ವರ್ಷದೊಳಗೆ ಹಣ ಹಾಗೂ ಚಿನ್ನವನ್ನು ಹಿಂದಿರುಗಿಸುವುದಾಗಿ ನಂಬಿಸಿ ಪರಿಚಯಸ್ಥ ಮಹಿಳೆಯಿಂದ 148 ಗ್ರಾಂ ಚಿನ್ನ ಪಡೆದು ಅಡವಿರಿಸಿ ಹಣ ಪಡೆದು ವಂಚಿಸಿದ ಆರೋಪದಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆರ್ಗಾ ಗ್ರಾಮದ ತ್ರಿಶಂಕು ನಗರ ನಿವಾಸಿ ಶ್ರೀಮತಿ ಮೋಹಿನಿ ಶೆಟ್ಟಿಗಾರ್ ಅವರು ನೀಡಿದ ದೂರಿನ ಮೇರೆಗೆ, ಜೀನತ್ ಹಾಗೂ ಮತ್ತೋರ್ವ ಮಹಿಳೆ ಗೀತಾ ರಾವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.

ದೂರಿನ ಪ್ರಕಾರ, ಜೀನತ್ ಅವರು ಸುಮಾರು 2020ನೇ ವರ್ಷದಲ್ಲಿ ಮೋಹಿನಿ ಶೆಟ್ಟಿಗಾರ್ ಅವರ ಪರಿಚಯಕ್ಕೆ ಬಂದಿದ್ದರು. ಈ ವೇಳೆ ತನಗೆ ತುರ್ತಾಗಿ ₹50 ಲಕ್ಷ ಹಣದ ಅಗತ್ಯವಿದ್ದು, ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿ ₹2 ಕೋಟಿ ಸಾಲ ಮಂಜೂರಾಗಲಿದ್ದು, ಸಾಲ ಬಿಡುಗಡೆಯಾದ ಕೂಡಲೇ ಒಂದು ವರ್ಷದೊಳಗೆ ಹಣ ಮತ್ತು ಚಿನ್ನವನ್ನು ಯಾವುದೇ ತೊಂದರೆಯಿಲ್ಲದೆ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.

ಜೀನತ್ ಅವರ ಮಾತನ್ನು ನಂಬಿದ ಮೋಹಿನಿ ಶೆಟ್ಟಿಗಾರ್ ಅವರು 2020ರ ಆಗಸ್ಟ್ ಹಾಗೂ ಅಕ್ಟೋಬ‌ರ್ ತಿಂಗಳಲ್ಲಿ ತಮ್ಮ ಬಳಿ ಇದ್ದ ಸುಮಾರು 148 ಗ್ರಾಂ ಚಿನ್ನವನ್ನು ಅಂದಾಜು ₹22 ಲಕ್ಷ ಮೌಲ್ಯದಂತೆ ಸುಧೀಂದ್ರ ಫೈನಾನ್ಸ್‌ನಲ್ಲಿ ಅಡವಿಟ್ಟಿದ್ದರು. ಚಿನ್ನವನ್ನು ಅಡವಿಟ್ಟು ಪಡೆದ ₹4.36 ಲಕ್ಷ ಹಣವನ್ನು ಜೀನತ್ ಅವರಿಗೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ವ್ಯವಹಾರದ ಸಂದರ್ಭದಲ್ಲಿ ಗೀತಾ ರಾವ್ ಕೂಡ ಜೀನತ್ ಅವರೊಂದಿಗೆ ಇದ್ದು, ಹಣ ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ.

ದೂರಿನ ಪ್ರಕಾರ, ಆರಂಭದಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಜೀನತ್ ಅವರು ಅಡವಿಟ್ಟ ಚಿನ್ನದ ಸಾಲದ ಕಂತುಗಳನ್ನು ಪಾವತಿಸುತ್ತಿದ್ದರು. ಇದರಿಂದ ಪಿರ್ಯಾದಿದಾರರಿಗೆ ಯಾವುದೇ ಅನುಮಾನ ಮೂಡಿರಲಿಲ್ಲ. ಆದರೆ ಬಳಿಕ ಕಂತು ಪಾವತಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದು, ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಡುವ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಕಾಲಕ್ರಮೇಣ ಚಿನ್ನವನ್ನು ವಾಪಸ್ ನೀಡುವಂತೆ ಹಲವು ಬಾರಿ ಕೇಳಿದರೂ ಜೀನತ್ ಅವರು ವಿವಿಧ ಕಾರಣಗಳನ್ನು ಹೇಳಿ ಕಾಲಹರಣ ಮಾಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಮೋಹಿನಿ ಶೆಟ್ಟಿಗಾ‌ರ್ ಅವರು ನೇರವಾಗಿ ಜೀನತ್ ಅವರ ಮನೆಗೆ ತೆರಳಿ ವಿಚಾರಿಸಿದಾಗ, ಮನೆಯವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದರೆ ಜೀವ ತೆಗೆಯುವುದಾಗಿ ಜೀನತ್ ಹಾಗೂ ಆಕೆಯ ತಮ್ಮನ ಪತ್ನಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಜೀನತ್‌ ಅವರು 750 ಲಕ್ಷ ನೀಡುವುದಾಗಿ ಸುಳ್ಳು ಭರವಸೆ ನೀಡಿ ನಂಬಿಸಿ, 148 ಗ್ರಾಂ ಚಿನ್ನವನ್ನು ಪಡೆದು ಅದನ್ನು ಅಡವಿರಿಸಿ ಹಣ ಪಡೆದು ಬಳಿಕ ಹಣ ಹಾಗೂ ಚಿನ್ನವನ್ನು ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ