ಹೆಚ್ಚಿನವರಿಗೆ ಈಗ ರಾತ್ರಿ ಮಲಗುತ್ತಿದ್ದಂತೆಯೇ ನಿದ್ದೆ ಬರುವುದಿಲ್ಲ ಎಂಬ ಸಮಸ್ಯೆ ಕಾಣತೊಡಗಿದೆ. ಮೊಬೈಲ್, ಲ್ಯಾಪ್ಟಾಪ್ ಸ್ಕ್ರೀನ್ ಗಳನ್ನುಇಡೀ ದಿನ ನೋಡುವುದು ಇದಕ್ಕೊಂದು ಕಾರಣವಾದರೆ, ಮಾನಸಿಕ ನೆಮ್ಮದಿ, ದೈಹಿಕ ಸಮಸ್ಯೆಗಳೂ ಇನ್ನೊಂದು ಕಾರಣ. ರಾತ್ರಿ ಮಲಗುವ ಮೊದಲು ಪಾದಗಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವ ಅಭ್ಯಾಸವು ಆಯುರ್ವೇದದಲ್ಲಿ ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿದೆ. ಇದನ್ನು ಪಾದಾಭ್ಯಂಗ ಎಂದು ಕರೆಯಲಾಗುತ್ತದೆ. ಆಯುರ್ವೇದದ ಪ್ರಕಾರ ಈ ಸರಳ ಅಭ್ಯಾಸವು ದೇಹಕ್ಕೆ ವಿಶ್ರಾಂತಿ ನೀಡುವುದರ ಜೊತೆಗೆ ಉತ್ತಮ ನಿದ್ರೆ, ಒತ್ತಡ ನಿವಾರಣೆ ಹಾಗೂ ಪಾದಗಳ ಆರೋಗ್ಯಕ್ಕೆ ಸಹಾಯಕವಾಗಬಹುದು.
ಪಾದಗಳಲ್ಲಿರುವ ನರ ತುದಿಗಳಿಗೆ ಮೃದುವಾಗಿ ಮಸಾಜ್ ಮಾಡುವುದರಿಂದ ದೇಹದಲ್ಲಿ ವಿಶ್ರಾಂತಿಯ ಭಾವನೆ ಮೂಡುತ್ತದೆ. ದಿನವಿಡೀ ಓಡಾಟದಿಂದ ಉಂಟಾಗುವ ಆಯಾಸ ಕಡಿಮೆಯಾಗಲು ಇದು ನೆರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಆಯುರ್ವೇದ ಏನು ಹೇಳುತ್ತದೆ?
ಆಯುರ್ವೇದದ ಪ್ರಕಾರ ಪಾದಗಳಲ್ಲಿ ದೇಹದ ವಿವಿಧ ಅಂಗಾಂಗಗಳಿಗೆ ಸಂಬಂಧಿಸಿದ ಪ್ರಮುಖ ಬಿಂದುಗಳಿವೆ. ಅವುಗಳಿಗೆ ನಿಯಮಿತವಾಗಿ ಎಳ್ಳೆಣ್ಣೆ, ತೆಂಗಿನೆಣ್ಣೆ ಅಥವಾ ತುಪ್ಪ ಬಳಸಿ ಮೃದುವಾಗಿ ಮಸಾಜ್ ಮಾಡಿದರೆ ದೇಹದ ಸಮತೋಲನ ಕಾಪಾಡಲು ನೆರವಾಗಬಹುದು. ಕೆಲವರು ಇದರಿಂದ ಕಣ್ಣಿನ ಆಯಾಸ ಕಡಿಮೆಯಾಗುತ್ತದೆ ಎಂದು ನಂಬುತ್ತಾರೆ. ಆದರೆ ಈ ಕುರಿತು ವೈಜ್ಞಾನಿಕ ಸಾಕ್ಷ್ಯಗಳು ಸೀಮಿತವಾಗಿವೆ.
ಪಾದ ಮಸಾಜ್ನಿಂದ ಸಿಗಬಹುದಾದ ಪ್ರಯೋಜನಗಳು
- ಉತ್ತಮ ನಿದ್ರೆ ಬರಲು ಸಹಾಯವಾಗಬಹುದು.
- ದಿನವಿಡೀ ಉಂಟಾಗುವ ಆಯಾಸ ಹಾಗೂ ಒತ್ತಡ ಕಡಿಮೆಯಾಗಬಹುದು.
- ಪಾದಗಳ ಚರ್ಮ ಮೃದುವಾಗಿ, ಒಣಚರ್ಮದ ಸಮಸ್ಯೆ ಕಡಿಮೆಯಾಗಬಹುದು.
- ರಕ್ತ ಸಂಚಾರ ಸುಧಾರಿಸಲು ನೆರವಾಗಬಹುದು.
- ನರಗಳು ಮತ್ತು ಸ್ನಾಯುಗಳಿಗೆ ವಿಶ್ರಾಂತಿ ದೊರೆಯಬಹುದು.
- ಮನಸ್ಸಿಗೆ ನೆಮ್ಮದಿ ಸಿಗುವ ಮೂಲಕ ಏಕಾಗ್ರತೆ ಹೆಚ್ಚಲು ಸಹಕಾರಿಯಾಗಬಹುದು.
ಉತ್ತಮ ನಿದ್ರೆಗೆ ಸಹಕಾರಿ
ನಿದ್ರಾಹೀನತೆ ಅಥವಾ ಒತ್ತಡದಿಂದ ಬಳಲುವವರಿಗೆ ಮಲಗುವ ಮುನ್ನ ಕೆಲ ನಿಮಿಷ ಪಾದಗಳಿಗೆ ಎಣ್ಣೆ ಮಸಾಜ್ ಮಾಡುವುದು ಆರಾಮದಾಯಕವಾಗಿರಬಹುದು. ಮೃದುವಾದ ಮಸಾಜ್ ದೇಹವನ್ನು ವಿಶ್ರಾಂತ ಸ್ಥಿತಿಗೆ ತಂದು ಸುಲಭವಾಗಿ ನಿದ್ರೆ ಬರುವಂತೆ ಮಾಡಬಹುದು.
ಮನಸ್ಸಿಗೂ ನೆಮ್ಮದಿ
ಪಾದ ಮಸಾಜ್ ಕೇವಲ ದೇಹಕ್ಕಷ್ಟೇ ಅಲ್ಲ, ಮನಸ್ಸಿಗೂ ವಿಶ್ರಾಂತಿ ನೀಡುತ್ತದೆ. ದಿನವಿಡೀ ಕೆಲಸದ ಒತ್ತಡ, ಮಾನಸಿಕ ಆಯಾಸ ಕಡಿಮೆಯಾಗಲು ಇದು ನೆರವಾಗಬಹುದು. ವಿದ್ಯಾರ್ಥಿಗಳು, ಕಚೇರಿ ಉದ್ಯೋಗಿಗಳು ಹಾಗೂ ಹೆಚ್ಚು ಸಮಯ ನಿಂತು ಕೆಲಸ ಮಾಡುವವರಿಗೆ ಈ ಅಭ್ಯಾಸ ಉಪಯುಕ್ತವಾಗಬಹುದು.
ಪಾದಗಳಿಗೆ ಮಸಾಜ್ ಮಾಡುವ ಸರಿಯಾದ ವಿಧಾನ
- ಮಲಗುವ ಮುನ್ನ ಪಾದಗಳನ್ನು ಸ್ವಚ್ಛವಾಗಿ ತೊಳೆದು ಒಣಗಿಸಿಕೊಳ್ಳಿ.
- ಎಳ್ಳೆಣ್ಣೆ, ತೆಂಗಿನೆಣ್ಣೆ ಅಥವಾ ತುಪ್ಪವನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳಿ.
- ಪಾದದ ಅಡಿಭಾಗ, ಹಿಮ್ಮಡಿ ಮತ್ತು ಕಾಲ್ಬೆರಳುಗಳಿಗೆ 5–10 ನಿಮಿಷ ಮೃದುವಾಗಿ ಮಸಾಜ್ ಮಾಡಿ.
- ಎಣ್ಣೆಯನ್ನು ರಾತ್ರಿಯಿಡೀ ಹಾಗೆಯೇ ಬಿಡಬಹುದು.
- ಬೆಳಿಗ್ಗೆ ಉಗುರುಬೆಚ್ಚಗಿನ ನೀರಿನಿಂದ ಪಾದಗಳನ್ನು ತೊಳೆದುಕೊಳ್ಳಿ.
ಯಾವ ಎಣ್ಣೆ ಉತ್ತಮ?
ಎಳ್ಳೆಣ್ಣೆ: ದೈನಂದಿನ ಬಳಕೆಗೆ ಸೂಕ್ತ. ವಿಶೇಷವಾಗಿ ಚಳಿಗಾಲ ಹಾಗೂ ಆಯಾಸದ ಸಮಯದಲ್ಲಿ ಹೆಚ್ಚು ಬಳಸಲಾಗುತ್ತದೆ.
ತೆಂಗಿನೆಣ್ಣೆ: ದೇಹದಲ್ಲಿ ಹೆಚ್ಚು ಉಷ್ಣತೆ ಇರುವವರಿಗೆ ಹಾಗೂ ಬೇಸಿಗೆಯಲ್ಲಿ ಉತ್ತಮ ಆಯ್ಕೆ. ಚರ್ಮವನ್ನು ತಂಪಾಗಿರಿಸಲು ಸಹಕಾರಿ.
ತುಪ್ಪ (ಘೃತ): ಪಾದಗಳ ಶುಷ್ಕತೆ ಕಡಿಮೆ ಮಾಡಲು ಮತ್ತು ಮೃದುವಾಗಿರಿಸಲು ನೆರವಾಗಬಹುದು.
ಗಮನಿಸಬೇಕಾದ ವಿಷಯ
ಪಾದ ಮಸಾಜ್ ಆರೋಗ್ಯಕರ ಅಭ್ಯಾಸವಾಗಿದ್ದರೂ, ಇದರಿಂದ ದೃಷ್ಟಿ ಸುಧಾರಿಸುತ್ತದೆ ಅಥವಾ ಕಣ್ಣಿನ ಕಾಯಿಲೆಗಳು ಗುಣವಾಗುತ್ತವೆ ಎಂಬುದಕ್ಕೆ ಬಲವಾದ ವೈಜ್ಞಾನಿಕ ಪುರಾವೆಗಳಿಲ್ಲ. ಮಧುಮೇಹದಿಂದ ಪಾದದ ಗಾಯಗಳು, ತೀವ್ರ ಸೋಂಕು, ಫಂಗಲ್ ಇನ್ಫೆಕ್ಷನ್ ಅಥವಾ ಚರ್ಮದ ಸಮಸ್ಯೆಗಳಿದ್ದರೆ ವೈದ್ಯರ ಸಲಹೆಯ ನಂತರವೇ ಎಣ್ಣೆ ಮಸಾಜ್ ಮಾಡುವುದು ಸೂಕ್ತ.
ನಿಯಮಿತವಾಗಿ ಮತ್ತು ಸರಿಯಾದ ವಿಧಾನದಲ್ಲಿ ಪಾದಗಳಿಗೆ ಮಸಾಜ್ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡರೆ ದೇಹಕ್ಕೆ ವಿಶ್ರಾಂತಿ, ಉತ್ತಮ ನಿದ್ರೆ ಹಾಗೂ ಒಟ್ಟಾರೆ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸಬಹುದು.















