ಚಲಿಸುತ್ತಿದ್ದ ರೈಲಿನಲ್ಲೇ ಸುರಕ್ಷಿತ ಹೆರಿಗೆ: ವೈದ್ಯಕೀಯ ವಿದ್ಯಾರ್ಥಿಗಳ ಸಮಯಪ್ರಜ್ಞೆಗೆ ಮೆಚ್ಚುಗೆ

ಚಲಿಸುತ್ತಿದ್ದ ರೈಲಿನಲ್ಲೇ ಗರ್ಭಿಣಿಗೆ ಸುರಕ್ಷಿತ ಹೆರಿಗೆ ಮಾಡಿಸಿ ತಾಯಿ-ಮಗುವಿನ ಜೀವ ಉಳಿಸಿದ ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಮೂವರು ಸ್ನಾತಕೋತ್ತರ ವಿದ್ಯಾರ್ಥಿಗಳು ಮಾನವೀಯತೆ ಹಾಗೂ ವೈದ್ಯಕೀಯ ಕೌಶಲ್ಯದ ಮಾದರಿಯಾಗಿದ್ದಾರೆ.

ಮಾನಸರೋಗ ಹಾಗೂ ಮನೋವಿಜ್ಞಾನ ವಿಭಾಗದ ಡಾ. ರಶ್ಮಿ ಬೀಳಗಿ, ಡಾ. ಶಾಹಿನ್ ಎಂ ಹಾಗೂ ಡಾ. ಲತಾಶ್ರೀ ಎನ್ ಅವರು ವಾರಾಣಸಿಯಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಸಮ್ಮೇಳನಕ್ಕೆ ರೈಲಿನಲ್ಲಿ ತೆರಳುತ್ತಿದ್ದ ವೇಳೆ ಸಹಪ್ರಯಾಣಿಕೆಯಾಗಿದ್ದ ಪೂರ್ಣಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಕೂಡಲೇ ಪರಿಸ್ಥಿತಿ ಪರಿಶೀಲಿಸಿದ ಅವರು ರೈಲಿನಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದರು.

ಹೆರಿಗೆಯ ವೇಳೆ ಮಗುವಿನ ಕುತ್ತಿಗೆಯ ಸುತ್ತ ಹೊಕ್ಕುಳ ಬಳ್ಳಿ ಸುತ್ತಿಕೊಂಡಿದ್ದರೂ ಅದನ್ನು ಯಶಸ್ವಿಯಾಗಿ ಸರಿಪಡಿಸಿ ಮಗುವನ್ನು ಸುರಕ್ಷಿತವಾಗಿ ಹೊರತಂದರು. ಜನನದ ಬಳಿಕ ಅಗತ್ಯ ಪುನರುಜ್ಜೀವನ ಚಿಕಿತ್ಸೆ ನೀಡಿ ಮಗುವಿನ ಆರೋಗ್ಯ ಸ್ಥಿರಗೊಳಿಸಲಾಯಿತು. ನಂತರ ಹೊಕ್ಕುಳ ಬಳ್ಳಿಯನ್ನು ಸುರಕ್ಷಿತವಾಗಿ ಕತ್ತರಿಸಿ ತಾಯಿ-ಮಗುವಿನ ಆರೈಕೆ ನಡೆಸಿ, ಮುಂದಿನ ರೈಲು ನಿಲ್ದಾಣದಲ್ಲಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು.

ಎಸ್‌ಡಿಎಂಇ ಸೊಸೈಟಿಯ ನಿರ್ದೇಶಕ ಶ್ರೀ ಶ್ರೇಯಸ್ ಕುಮಾರ್ ಡಿ, “ವೈದ್ಯರ ಕರ್ತವ್ಯ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಲ್ಲ. ತುರ್ತು ಸಂದರ್ಭಗಳಲ್ಲಿ ಸಮಯೋಚಿತ ಸೇವೆಯೇ ವೈದ್ಯಕೀಯ ವೃತ್ತಿಯ ನಿಜವಾದ ಧರ್ಮ,” ಎಂದು ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಈ ಘಟನೆ ಸಮಯಪ್ರಜ್ಞೆ, ತಂಡದ ಕಾರ್ಯ ಹಾಗೂ ವೈದ್ಯಕೀಯ ಪರಿಣತಿಯೊಂದಿಗೆ ಯಾವುದೇ ಸವಾಲಿನ ಸಂದರ್ಭದಲ್ಲೂ ಜೀವ ಉಳಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.