ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಆರ್‌ಎಸ್‌ಎಸ್ ಕಾರಣ- ಎಂ.ಜಿ.ಹೆಗಡೆ

ಉಡುಪಿ: ನೀಟ್ ಪರೀಕ್ಷೆಯಲ್ಲಿನ ಅಕ್ರಮದ ವಿರುದ್ಧ ಹಾಗೂ ಇದರಿಂದ ಅಸುನೀಗಿದ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕ್ಯಾಂಡಲ್ ಲೈಟ್ ಮಾರ್ಚ್ ಹಮ್ಮಿಕೊಳ್ಳಲಾಗಿತ್ತು.

ಕ್ಯಾಂಡಲ್ ಲೈಟ್ ಮಾರ್ಚ್‌ಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್ ಬಳಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಚಾಲನೆ ನೀಡಿದರು.

ಅಲ್ಲಿಂದ ಹೊರಟ ಜಾಥವು ಕಲ್ಸಂಕ, ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣದ ಮಾರ್ಗವಾಗಿ ನಗರದ ಹಳೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು.

ಬಳಿಕ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಂ.ಜಿ.ಹೆಗಡೆ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಆರ್‌ಎಸ್‌ಎಸ್ ಕಾರಣ. ಇದು ನಮಗೆ ಅರ್ಥ ಆಗಬೇಕು. ಆರ್‌ಎಸ್‌ಎಸ್ ಮೋದಿ ಸರಕಾರ ಬಂದಾಗ ಶಿಕ್ಷಣ ಮತ್ತು ಸಂಸ್ಕೃತಿ ಇಲಾಖೆಯ ಸಚಿವಾಲಯವನ್ನು ಕೇಳಿತು.

ಮುಂಬೈಗೆ ಈ ಎರಡು ಇಲಾಖೆಗಳನ್ನು ಇಟ್ಟುಕೊಂಡು ಆರ್‌ಎಸ್‌ಎಸ್ ತನ್ನ ವಿಚಾರಧಾರೆಯನ್ನು ಆಡಳಿತ ವ್ಯವಸ್ಥೆಯಲ್ಲಿ ಅನುಷ್ಠಾನಗೊಳಿಸುತ್ತಿದೆ. ಎಬಿವಿಪಿ, ಆರೆಸ್ಸೆಸ್‌ ನವರು ನೀಟ್ ಅಧಿಕಾರ ಮಂಡಳಿಯಲ್ಲಿ ಬಂದು ಕುಳಿತುಕೊಂಡಿದ್ದಾರೆ ಎಂದು ದೂರಿದರು.

ಆರ್‌ಎಸ್‌ಎಸ್ ಅಧಿಕಾರದ ರಾಜಕಾರಣಕ್ಕೆ ಬಂದವರಲ್ಲ. ಅವರು ಈ ರಾಜಕಾರಣವನ್ನು ದುರಪಯೋಗ ಮಾಡಿ ಕೊಂಡು ಭಾರತದಲ್ಲಿ ಹೊಸ ಸೈದ್ಧಾಂತಿಕತೆಯನ್ನು ಸ್ಥಾಪನೆ ಮಾಡಲು ಬಂದವರು.

ಆರೆಸ್ಸೆಸ್‌ಗೆ ವೈಜ್ಞಾನಿಕ, ವೈಚಾರಿಕ ಹಾಗೂ ಅಭಿವೃದ್ಧಿ ಶೀಲ ಮನಸ್ಸುಗಳನ್ನು ತಯಾರು ಮಾಡುವ ಶಿಕ್ಷಣ ಬೇಕಿಲ್ಲ. ಅವರಿಗೆ ಸಾರ್ವಕರ್ ಪ್ರತಿಪಾದಿಸುವ ಹಿಂದುತ್ವದ ಶೈಕ್ಷಣಿಕ ವ್ಯವಸ್ಥೆ ಬೇಕಾಗಿದೆ. ಹಾಗಾಗಿ ಉಡುಪಿ ಕ್ಷೇತ್ರದ ಶಾಸಕ ಯಶ್‌ಪಾಲ್ ಸುವರ್ಣರಿಗೆ ತನ್ನ ಕ್ಷೇತ್ರಕ್ಕೆ ಐಐಟಿ ಬೇಕು ಎಂದು ಅನಿಸುವುದಿಲ್ಲ. ಅವರಿಗೆ ಕೇಸರಿ ಶಾಲು ಹಾಕಿಕೊಂಡು ಯುವಕರು ಹೊಡೆದಾಟ ಮಾಡಿದರೆ, ಹಿಜಾಬ್ ಗಲಾಟೆ ಮಾಡಿದರೆ ಮಾತ್ರ ಮತ ಸಿಗುವುದು. ಅವರಿಗೆ ವೈಜ್ಞಾನಿಕ ಚಿಂತನೆ ಬೇಡ ಎಂದು ಅವರು ಕಟುವಾಗಿ ಟೀಕಿಸಿದರು.

ಬಿಜೆಪಿಯ ಹೈಕಮಾಂಡ್ ಮುಖ ಇಲ್ಲದ ಆರ್‌ಎಸ್‌ಎಸ್. ಯಾಕೆಂದರೆ ಅದು ಇನ್ನೂ ನೋಂದಾಣಿ ಮಾಡಿಕೊಂಡಿಲ್ಲ ಮತ್ತು ಸಾರ್ವಜನಿಕವಾಗಿ ಎಲ್ಲೂ ಮುಂದೆ ಬರುವುದಿಲ್ಲ. ಭಾರತದ ಎಲ್ಲ ವ್ಯವಸ್ಥೆಯಲ್ಲಿ ಬಂದು ಪ್ರಶ್ನಿಸುವ ಆರೆಸ್ಸೆಸ್‌ನ್ನು ಕೂಡ ಪ್ರಶ್ನಿಸುವ ಹಕ್ಕು ನಮಗೆ ಇದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರಯ್ಯ ಅಂಜುಮ್, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಹರಿಪ್ರಸಾದ್ ರೈ, ಪ್ರಖ್ಯಾತ್ ಶೆಟ್ಟಿ, ಮುರಳಿ ಶೆಟ್ಟಿ, ಅನಿತಾ ಡಿಸೋಜ, ಮಹಾಬಲ ಕುಂದರ್, ಸುರೇಶ್ ಶೆಟ್ಟಿ ಬನ್ನಂಜೆ, ದಿನಕರ ಶೆಟ್ಟಿ, ಹರೀಶ್ ಕಿಣಿ, ಸತೀಶ್ ಮಂಚಿ, ಕೀರ್ತಿ ಶೆಟ್ಟಿ, ಸಂತೋಷ್ ಕುಲಾಲ್, ಸತೀಶ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.