ವಯನಾಡಿನಲ್ಲಿ ಮತ್ತೆ ಭಾರೀ ಭೂಕುಸಿತ: ಇಬ್ಬರು ಕಾರ್ಮಿಕರು ಜೀವಂತ ಸಮಾಧಿ, 30 ಮಂದಿ ನಾಪತ್ತೆ

ಕೇರಳದ Kerala ರಾಜ್ಯದ ವಯನಾಡು Wayanad ಜಿಲ್ಲೆಯ ಮೆಪ್ಪಾಡಿ ಪ್ರದೇಶದಲ್ಲಿ ಭಾರೀ ಮಳೆಯ ಪರಿಣಾಮ ಭೂಕುಸಿತ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ. ಸುಮಾರು 20 ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದು, 30 ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

ಭೂಕುಸಿತವು ವಯನಾಡ್ ಸುರಂಗ ನಿರ್ಮಾಣ ಯೋಜನೆಯ ಮೀನಾಕ್ಷಿ ಸೇತುವೆ ಸಮೀಪ ಸಂಭವಿಸಿದೆ. ಎರಡು ವರ್ಷಗಳ ಹಿಂದೆ ಚೂರಲ್ಮಲದಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದ ನೆನಪು ಇನ್ನೂ ಮಾಸದಿರುವಾಗಲೇ ಮತ್ತೊಮ್ಮೆ ಈ ದುರಂತ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ದುರಂತದಲ್ಲಿ ಗಾಯಗೊಂಡಿದ್ದ ಆರು ಮಂದಿಯನ್ನು ಸ್ಥಳೀಯರು ರಕ್ಷಿಸಿ ಮೆಪ್ಪಾಡಿಯ ಡಾ. ಮೂಪೆನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೀರಾ ಸುರೇಶ್, ದಿಲೀಪ್, ಸೂರಜ್, ಸಂಜಯ್ ಥಾಪುರ್, ರಜನೀಶ್ ಹಾಗೂ ತನ್ಮಯ್ ಘೋಷ್ ಗಾಯಗೊಂಡವರಾಗಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ಭೂಕುಸಿತದ ಮಾಹಿತಿ ತಿಳಿದ ತಕ್ಷಣ ಕೇರಳ ಸರ್ಕಾರ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಘಟನಾ ಸ್ಥಳಕ್ಕೆ ಇಬ್ಬರು ಸಚಿವರನ್ನು ತಕ್ಷಣವೇ ಭೇಟಿ ನೀಡುವಂತೆ ಸರ್ಕಾರ ಸೂಚನೆ ನೀಡಿದೆ.

ಕಳೆದ 24 ಗಂಟೆಗಳಲ್ಲಿ ವಯನಾಡ್ ಜಿಲ್ಲೆಯಲ್ಲಿ ಸುಮಾರು 26 ಸೆಂ.ಮೀ. ಮಳೆಯಾಗಿದ್ದು, ನಿರಂತರ ಮಳೆಯಿಂದ ಚೂರಲ್ಮಲ ಭಾಗಕ್ಕೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸುರಂಗ ಕಾಮಗಾರಿಯನ್ನೂ ಮುಂಜಾಗ್ರತಾ ಕ್ರಮವಾಗಿ ನಿನ್ನೆಯಿಂದಲೇ ನಿಲ್ಲಿಸಲಾಗಿತ್ತು. ಭೂಕುಸಿತದಲ್ಲಿ ಹಲವು ವಾಹನಗಳು ಮಣ್ಣಿನಡಿ ಸಿಲುಕಿರುವುದಾಗಿ ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.