ಕಾರ್ಕಳ: ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಹವಾಮಾನ ಮತ್ತು ವಾಯು ಗುಣಮಟ್ಟ ಮೊನಿಟರಿಂಗ್ ಕೇಂದ್ರವನ್ನು ಜುಲೈ 3ರಂದು ನಿಟ್ಟೆ ತಾಂತ್ರಿಕ ಕಾಲೇಜಿನ ಕ್ಯಾಂಪಸ್ ನಲ್ಲಿ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು Wrkwrk, 99Games ಹಾಗೂ Robosoft ಸಂಸ್ಥೆಗಳ ಸಂಸ್ಥಾಪಕರಾದ ರೋಹಿತ್ ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ TiE ಮಂಗಳೂರು ಕಾರ್ಯನಿರ್ವಾಹಕ ನಿರ್ದೇಶಕ ಅತುಲ್ ಉಡುಪಿ, ಜನರಲ್ ಇಲೆಕ್ಟ್ರಿಕ್ ಹೆಲ್ತ್ಕೇರ್ ನ ಸಾಫ್ಟ್‌ವೇರ್ ಡೆವಲಪರ್ ಸಿದ್ಧಾರ್ಥ್ ಪೈ, ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾದ ಡಾ. ನಿರಂಜನ್ ಎನ್. ಚಿಪ್ಳುಣ್ಕರ್, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಹವಾಮಾನ ಕೇಂದ್ರವು ತಾಪಮಾನ, ಸಾಪೇಕ್ಷ ಆರ್ದ್ರತೆ, ಮಳೆಯ ಪ್ರಮಾಣ, ಗಾಳಿಯ ವೇಗ, ಗಾಳಿಯ ದಿಕ್ಕು, ವಾಯು ಗುಣಮಟ್ಟ ಸೂಚ್ಯಂಕ (AQI), ಕಾರ್ಬನ್ ಮಾನಾಕ್ಸೈಡ್ (CO), ಓಝೋನ್ (O₃) ಹಾಗೂ ಸೂಕ್ಷ್ಮ ಕಣಗಳಾದ PM₁, PM₂.₅, PM₄ ಮತ್ತು PM₁₀ ಸೇರಿದಂತೆ ಪ್ರಮುಖ ಹವಾಮಾನ ಮತ್ತು ಪರಿಸರದ ಅಂಶಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ ದಾಖಲಿಸುತ್ತದೆ.
ಸಂಗ್ರಹವಾಗುವ ಮಾಹಿತಿಯನ್ನು ಸುರಕ್ಷಿತ ಕ್ಲೌಡ್ ಪ್ಲಾಟ್ಫಾರ್ಮ್ ಗೆ ರವಾನಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿರುವ ವೆಬ್ ಡ್ಯಾಶ್‌ಬೋರ್ಡ್ ಮೂಲಕ ಪ್ರದರ್ಶಿಸಲಾಗುತ್ತದೆ. ಇದರಿಂದ ಇಂಟರ್‌ನೆಟ್ ಸಂಪರ್ಕವಿರುವ ಯಾವುದೇ ಸಾಧನದ ಮೂಲಕ ನಿಟ್ಟೆ ಪ್ರದೇಶದ ರಿಯಲ್-ಟೈಮ್ ಹವಾಮಾನ ಹಾಗೂ ವಾಯು ಗುಣಮಟ್ಟದ ಮಾಹಿತಿಯನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ. ಈ ಡ್ಯಾಶ್‌ಬೋರ್ಡ್ ಅನ್ನು https://nmamit-weather-station.web.app/ ನಲ್ಲಿ ವೀಕ್ಷಿಸಬಹುದಾಗಿದೆ.
ಕರಾವಳಿ ಭಾಗದಲ್ಲಿ ಸಂವೇದಕ (Sensor) ಆಧಾರಿತ ತಂತ್ರಜ್ಞಾನದ ಮೂಲಕ ವಿವಿಧ ಪರಿಸರ ಮಾನದಂಡಗಳನ್ನು ಒಂದೇ ಆನ್‌ಲೈನ್ ವೇದಿಕೆಯಲ್ಲಿ ಸಾರ್ವಜನಿಕರಿಗೆ ರಿಯಲ್-ಟೈಮ್‌ನಲ್ಲಿ ಒದಗಿಸುವ ಪ್ರಥಮ ಸಾರ್ವಜನಿಕ ಹವಾಮಾನ ಮತ್ತು ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರ ಎಂಬ ಹೆಗ್ಗಳಿಕೆಗೆ ಈ ಯೋಜನೆ ಪಾತ್ರವಾಗಿದೆ.
ಈ ಯೋಜನೆಯನ್ನು ಎನ್‌ಎಂಎಎಂಐಟಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಡಾ. ಸುಕೇಶ್ ರಾವ್ ಎಂ ಅವರ ಮಾರ್ಗದರ್ಶನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದ ಹಾಗೂ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವರು.

















