ಬಂಟ್ವಾಳ: ನಗದು ಹಾಗೂ ಪ್ರಮುಖ ದಾಖಲೆಗಳಿದ್ದ ಕಳೆದುಹೋಗಿದ್ದ ಪರ್ಸ್ ಅನ್ನು ಅದರ ಮಾಲೀಕರಿಗೆ ಸುರಕ್ಷಿತವಾಗಿ ಹಿಂದಿರುಗಿಸುವ ಮೂಲಕ ಆಟೋ ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ಶುಕ್ರವಾರ ಕಲ್ಲಡ್ಕದಲ್ಲಿ ನಡೆದಿದೆ.
ಉಪ್ಪಿನಂಗಡಿ ಸಮೀಪದ ಪೆರ್ನೆಯ ಸತ್ಯಶ್ರೀ ಕ್ಯಾಟರಿಂಗ್ ಮತ್ತು ಮಾತೃಶ್ರೀ ಕ್ಯಾಟರಿಂಗ್ ಮಾಲೀಕರ ಸಹೋದರರೂ ಆಗಿರುವ ಆಟೋ ಚಾಲಕ ರುದ್ರೇಶ್ ಪೆರ್ನೆ ಅವರು ಕೆಲಸದ ನಿಮಿತ್ತ ಕಲ್ಲಡ್ಕಕ್ಕೆ ಬಂದಿದ್ದ ವೇಳೆ, ಸರ್ವಿಸ್ ರಸ್ತೆಯಲ್ಲಿ ಬಿದ್ದಿದ್ದ ಪರ್ಸ್ ಕಂಡು ತೆಗೆದುಕೊಂಡಿದ್ದಾರೆ.
ಪರ್ಸ್ನಲ್ಲಿದ್ದ ಮಾಹಿತಿಯ ಆಧಾರದ ಮೇಲೆ ಅದರ ಮಾಲೀಕರನ್ನು ಸಂಪರ್ಕಿಸಿದ ರುದ್ರೇಶ್, ಪಾಣೆಮಂಗಳೂರು-ಮೇಲ್ಕಾರ್ನ ಭಗವತಿ ಸ್ಟೀಲ್ಸ್ನಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿರುವ ಬೆಂಗಳೂರು ಮೂಲದ ಹಫೀಜ್ ಅವರಿಗೆ ಕರೆ ಮಾಡಿ, ಕಲ್ಲಡ್ಕ ಮಸೀದಿಯ ಬಳಿ ಬರುವಂತೆ ತಿಳಿಸಿದ್ದಾರೆ. ಬಳಿಕ ನಗದು ಹಾಗೂ ದಾಖಲೆಗಳಿದ್ದ ಪರ್ಸ್ ಅನ್ನು ಸುರಕ್ಷಿತವಾಗಿ ಅವರ ಕೈಗೆ ಹಸ್ತಾಂತರಿಸಿದ್ದಾರೆ.
ರುದ್ರೇಶ್ ಪೆರ್ನೆ ಅವರ ಪ್ರಾಮಾಣಿಕ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

















