ಸಿನಿಮಾ, ವೆಬ್‌ಸಿರೀಸ್‌ಗಳ ಪೈರಸಿ, ಟೆಲಿಗ್ರಾಂಗೆ ನೋಟಿಸ್ ನೀಡಿದ ಕೇಂದ್ರ!

ನವದೆಹಲಿ: ಸಿನಿಮಾ ಹಾಗೂ ವೆಬ್‌ಸಿರೀಸ್‌ಗಳ ಪೈರಸಿ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಟೆಲಿಗ್ರಾಂಗೆ ನೋಟಿಸ್ ಜಾರಿಗೊಳಿಸಿದ್ದು, ಕಾನೂನುಬಾಹಿರವಾಗಿ ಹಂಚಲಾಗುತ್ತಿರುವ ಸಿನಿಮಾ ಮತ್ತು ಒಟಿಟಿ ಕಂಟೆಂಟ್ ವಿರುದ್ಧ ತಕ್ಷಣ ಕ್ರಮ ಕೈಗೊಂಡು 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ನೋಟಿಸ್ ನೀಡಿದ್ದು, ಟೆಲಿಗ್ರಾಂನ ವಿವಿಧ ಚಾನೆಲ್‌ಗಳು ಹಾಗೂ ಗುಂಪುಗಳ ಮೂಲಕ ಹೊಸ ಸಿನಿಮಾಗಳು, ಒಟಿಟಿ ವೇದಿಕೆಗಳ ವಿಷಯಗಳು ಮತ್ತು ಇತರೆ ಆಡಿಯೋ-ವಿಜುವಲ್ ಕೃತಿಗಳನ್ನು ಅನಧಿಕೃತವಾಗಿ ಹಂಚಲಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರವು ಈ ಬಾರಿ ಕೇವಲ ಪ್ರತ್ಯೇಕ ಪೈರಸಿ ಲಿಂಕ್‌ಗಳು ಅಥವಾ ಚಾನೆಲ್‌ಗಳನ್ನು ತೆಗೆದುಹಾಕುವ ಕ್ರಮಕ್ಕೆ ಸೀಮಿತವಾಗದೇ, ಸಂಪೂರ್ಣ ವೇದಿಕೆಯ ಜವಾಬ್ದಾರಿಯತ್ತ ಗಮನ ಹರಿಸಿದೆ. ಪೈರಸಿ ತಡೆಯಲು ಟೆಲಿಗ್ರಾಂ ಇದುವರೆಗೆ ಯಾವ ಕ್ರಮಗಳನ್ನು ಕೈಗೊಂಡಿದೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಯಾವ ವ್ಯವಸ್ಥೆಯನ್ನು ರೂಪಿಸಲಿದೆ ಎಂಬುದರ ಕುರಿತು 15 ದಿನಗಳೊಳಗೆ ವಿವರವಾದ ವರದಿ ನೀಡುವಂತೆ ಸೂಚಿಸಲಾಗಿದೆ.

ಹೊಸ ಸಿನಿಮಾಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟೆಲಿಗ್ರಾಂ ಮೂಲಕ ಪೈರಸಿ ಪ್ರತಿಗಳು ವ್ಯಾಪಕವಾಗಿ ಹರಡುತ್ತಿರುವುದರಿಂದ ಚಿತ್ರರಂಗ ಮತ್ತು ಒಟಿಟಿ ಸಂಸ್ಥೆಗಳಿಗೆ ಭಾರೀ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ನಿರ್ಮಾಪಕರು ಹಾಗೂ ಒಟಿಟಿ ಸಂಸ್ಥೆಗಳ ಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಡಿಜಿಟಲ್ ವೇದಿಕೆಗಳ ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ನಿಗದಿತ ಅವಧಿಯಲ್ಲಿ ಟೆಲಿಗ್ರಾಂ ಸಮರ್ಪಕ ಉತ್ತರ ನೀಡದಿದ್ದರೆ ಅಥವಾ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ, ಮಾಹಿತಿ ತಂತ್ರಜ್ಞಾನ ಮತ್ತು ಪ್ರಸಾರಕ್ಕೆ ಸಂಬಂಧಿಸಿದ ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಮುಂದಿನ ಕ್ರಮಗಳನ್ನು ಪರಿಗಣಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.