ಸ್ವಂತ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಿ ದಾಖಲೆ ಬರೆದ KKR : ಕ್ಯಾಲಿಫೋರ್ನಿಯಾದಲ್ಲಿ ನಿರ್ಮಾಣವಾಯ್ತು ಭರ್ಜರಿ ಸ್ಟೇಡಿಯಂ!

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಈ ಮೈದಾನ ಪ್ರಮುಖ ಕೇಂದ್ರಗಳಲ್ಲಿ ಒಂದಾಗುವ ಸಾಧ್ಯತೆಯಿದೆ. ಇದರಿಂದ ಅಮೆರಿಕದಲ್ಲಿ ಕ್ರಿಕೆಟ್‌ಗೆ ಇನ್ನಷ್ಟು ಉತ್ತೇಜನ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವುಕವಾಗಿ ಪ್ರತಿಕ್ರಿಯಿಸಿರುವ ಶಾರುಖ್ ಖಾನ್, “ಕನಸಾಗಿ ಆರಂಭವಾದುದು ಇಂದು ನನಸಾಗಿದೆ” ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ ಐಸಿಸಿ ಅಧ್ಯಕ್ಷ ಜಯ್ ಶಾ ಹಾಗೂ ಸಿಇಒ ಸಂಜೋಗ್ ಗುಪ್ತ ಅವರಿಗೆ ಸಹಕಾರಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.

ಫೇರ್‌ಪ್ಲೆಕ್ಸ್ ಆವರಣದಲ್ಲಿ ನಿರ್ಮಾಣಗೊಂಡಿರುವ ಈ ಸ್ಟೇಡಿಯಂ ಕೇವಲ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡದ ಹೋಮ್ ಗ್ರೌಂಡ್ ಮಾತ್ರವಲ್ಲ; ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ವಿಸ್ತರಿಸುವ ನೈಟ್ ರೈಡರ್ಸ್ ಗ್ರೂಪ್‌ನ ದೀರ್ಘಕಾಲದ ದೃಷ್ಟಿಕೋನದ ಪ್ರತೀಕವೂ ಆಗಿದೆ. ಇಲ್ಲಿ ಮೇಜರ್ ಲೀಗ್ ಕ್ರಿಕೆಟ್ (MLC) ಪಂದ್ಯಗಳೂ ನಡೆಯಲಿವೆ.

ಶಾರುಖ್ ಖಾನ್ ಅವರು ಐಪಿಎಲ್‌ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಜಾಗತಿಕ ಕ್ರಿಕೆಟ್ ಬ್ರ್ಯಾಂಡ್ ಆಗಿ ಬೆಳೆಸಿದ್ದಾರೆ. ಪ್ರಸ್ತುತ ನೈಟ್ ರೈಡರ್ಸ್ ಕುಟುಂಬದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (ಭಾರತ), ಟ್ರಿನ್‌ಬಾಗೋ ನೈಟ್ ರೈಡರ್ಸ್ (CPL), ಅಬುಧಾಬಿ ನೈಟ್ ರೈಡರ್ಸ್ (ILT20) ಹಾಗೂ ಲಾಸ್ ಏಂಜಲೀಸ್ ನೈಟ್ ರೈಡರ್ಸ್ (MLC) ತಂಡಗಳು ಸೇರಿವೆ.

ಅಮೆರಿಕದಲ್ಲಿ ಸಮರ್ಪಿತ ಕ್ರಿಕೆಟ್ ಸ್ಟೇಡಿಯಂ ಸ್ಥಾಪನೆಯಾಗಿರುವುದು ನೈಟ್ ರೈಡರ್ಸ್ ಗ್ರೂಪ್‌ನ ಅಂತರರಾಷ್ಟ್ರೀಯ ವಿಸ್ತರಣೆಗೆ ಮತ್ತಷ್ಟು ಬಲ ತುಂಬಿದೆ. 128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರಳುತ್ತಿರುವ ಹಿನ್ನೆಲೆಯಲ್ಲಿ ಈ ಕ್ರೀಡಾಂಗಣ ಹೊಸ ಅಭಿಮಾನಿಗಳನ್ನು ಸೆಳೆಯುವ ಪ್ರಮುಖ ವೇದಿಕೆಯಾಗಲಿದೆ.

ಆದರೆ, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಲಾಸ್ ಏಂಜಲೀಸ್ ನೈಟ್ ರೈಡರ್ಸ್‌ಗೆ ಸೋಲು ಎದುರಾಯಿತು. ವಾಷಿಂಗ್ಟನ್ ಫ್ರೀಡಂ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ತಂಡ ಕೇವಲ 108 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ಗುರಿ ಬೆನ್ನಟ್ಟಿದ ವಾಷಿಂಗ್ಟನ್ ಫ್ರೀಡಂ 17.1 ಓವರ್‌ಗಳಲ್ಲಿ ಗುರಿ ತಲುಪಿ ಸುಲಭ ಜಯ ದಾಖಲಿಸಿತು.