ಡೇಂಜರ್ ಝೋನ್ ನಲ್ಲಿದೆ ದ.ಕ.ಜಿಲ್ಲೆಯ 88 ಸ್ಥಳಗಳು, ಮಳೆ ಜಾಸ್ತಿಯಾದ್ರೆ ಇಲ್ಲೂ ಸಂಭವಿಸಬಹುದು ದೊಡ್ಡ ಭೂಕುಸಿತ!

ದಕ್ಷಿಣ ಕನ್ನಡ: ನಿರಂತರ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕುಸಿತದ ಆತಂಕ ಹೆಚ್ಚಾಗಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಜನರಿಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಜಿಲ್ಲೆಯ 88 ಸ್ಥಳಗಳನ್ನು ಭೂಕುಸಿತದ ಅತಿ ಅಪಾಯಕಾರಿ ಪ್ರದೇಶಗಳೆಂದು ಗುರುತಿಸಲಾಗಿದೆ.

ಜಿಲ್ಲಾಡಳಿತದ ಮಾಹಿತಿ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಘಟನೆಗಳಲ್ಲಿ 17 ಮಂದಿ ಮೃತಪಟ್ಟಿದ್ದು, ಈ ವರ್ಷವೂ ಈಗಾಗಲೇ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್, ನೆರಿಯ, ಶಿಶಿಲ ಸೇರಿದಂತೆ ಮಂಗಳೂರು ಸಮೀಪದ ಕೆತ್ತಿಕಲ್ ಪ್ರದೇಶಗಳಲ್ಲೂ ಭೂಕುಸಿತದ ಅಪಾಯವಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಬಂಟ್ವಾಳ, ಪುತ್ತೂರು, ಸುಳ್ಯ, ಕಡಬ ಹಾಗೂ ಉಳ್ಳಾಲ ತಾಲೂಕಿನ ಹಲವು ಪ್ರದೇಶಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ.

ಐಐಟಿ ಧಾರವಾಡದ ಅಧ್ಯಯನ ಹಾಗೂ ಕೃತಕ ಬುದ್ಧಿಮತ್ತೆ (AI) ಆಧಾರಿತ ವಿಶ್ಲೇಷಣೆಯ ಪ್ರಕಾರ, ಜಿಲ್ಲೆಯ ಶೇಕಡಾ 24ಕ್ಕೂ ಹೆಚ್ಚು ಭೂಭಾಗ ಭೂಕುಸಿತದ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ತೀವ್ರ ಮಳೆ, ಗುಡ್ಡ ಪ್ರದೇಶಗಳಲ್ಲಿನ ಮಾನವ ಚಟುವಟಿಕೆಗಳು ಹಾಗೂ ಭೂಬಳಕೆಯ ಬದಲಾವಣೆಗಳು ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ 115 ಪರಿಹಾರ ಕೇಂದ್ರಗಳನ್ನು ಸಿದ್ಧಪಡಿಸಿದ್ದು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಸೇರಿದಂತೆ ವಿವಿಧ ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. ಅಗತ್ಯವಿದ್ದರೆ ಅಪಾಯಕಾರಿ ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ.

ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಭೂಕುಸಿತದ ಅಪಾಯವಿರುವ ಪ್ರದೇಶಗಳಲ್ಲಿ ವಾಸಿಸುವವರು ಅಧಿಕಾರಿಗಳ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದೆ. ಮನೆಗಳನ್ನು ತಾತ್ಕಾಲಿಕವಾಗಿ ಖಾಲಿ ಮಾಡುವಂತೆ ಸೂಚನೆ ಬಂದರೆ ವಿಳಂಬ ಮಾಡದೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಮಳೆಗಾಲದ ಅವಧಿಯಲ್ಲಿ ಅನಗತ್ಯವಾಗಿ ಗುಡ್ಡ ಪ್ರದೇಶಗಳಿಗೆ ತೆರಳುವುದನ್ನು ತಪ್ಪಿಸುವಂತೆ ಹಾಗೂ ಯಾವುದೇ ಅನುಮಾನಾಸ್ಪದ ಬಿರುಕುಗಳು ಅಥವಾ ಭೂಕುಸಿತದ ಲಕ್ಷಣಗಳು ಕಂಡುಬಂದರೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.