ವಾಟ್ಸಾಪ್ ಹೊಸ ವೈಶಿಷ್ಟ್ಯದ ಕುರಿತು ಆತಂಕ ವ್ಯಕ್ತಪಡಿಸಿದ ಕೇಂದ್ರ ಸರಕಾರ: ವಾಟ್ಸಾಪ್ ಗೆ ಸರಕಾರ ಕೇಳಿದ ಪ್ರಶ್ನೆಗಳೇನು?

ನವದೆಹಲಿ: ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳದೆ ಯೂಸರ್‌ನೇಮ್ ಮೂಲಕ ಸಂಪರ್ಕ ಸಾಧಿಸಲು ಅವಕಾಶ ಕಲ್ಪಿಸುವ ವಾಟ್ಸಪ್‌ನ ಹೊಸ ವೈಶಿಷ್ಟ್ಯದ ಕುರಿತು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಈ ವೈಶಿಷ್ಟ್ಯಕ್ಕೆ ಸಂಬಂಧಿಸಿದಂತೆ ವಿವರವಾದ ಮಾಹಿತಿಯನ್ನು ಸಲ್ಲಿಸುವಂತೆ ಮೆಟಾಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿಗೊಳಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ವಾಟ್ಸಪ್‌ನ ಹೊಸ ಯೂಸರ್‌ನೇಮ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ, ಬಳಕೆದಾರರ ಸುರಕ್ಷತೆ ಮತ್ತು ಗೌಪ್ಯತೆಗಾಗಿ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಕುರಿತು ಮೂರು ದಿನಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಬಳಕೆದಾರರ ಮೊಬೈಲ್ ಸಂಖ್ಯೆಯನ್ನು ಬಹಿರಂಗಪಡಿಸದೆ ಸಂವಹನ ನಡೆಸಲು ಅವಕಾಶ ನೀಡುವ ಮೂಲಕ ಗೌಪ್ಯತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಹೊಸ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮೆಟಾ ಹೇಳಿದೆ. ಆದರೆ, ಈ ವ್ಯವಸ್ಥೆಯ ದುರ್ಬಳಕೆಯ ಸಾಧ್ಯತೆಗಳ ಬಗ್ಗೆ ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಅಧಿಕಾರಿಗಳ ಪ್ರಕಾರ, ಯೂಸರ್‌ನೇಮ್ ವ್ಯವಸ್ಥೆಯಿಂದ ನಕಲಿ ಖಾತೆಗಳನ್ನು ಸೃಷ್ಟಿಸುವುದು, ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ವಂಚನೆ ನಡೆಸುವುದು ಹಾಗೂ ವಿವಿಧ ರೀತಿಯ ಸೈಬರ್ ಅಪರಾಧಗಳಿಗೆ ಅವಕಾಶ ಹೆಚ್ಚಾಗುವ ಸಾಧ್ಯತೆ ಇದೆ. ಮತ್ತೊಬ್ಬರ ಹೆಸರನ್ನು ಹೋಲುವ ಯೂಸರ್‌ನೇಮ್‌ಗಳನ್ನು ಬಳಸಿಕೊಂಡು ಸಾರ್ವಜನಿಕರನ್ನು ದಾರಿ ತಪ್ಪಿಸುವುದು, ಗುರುತಿನ ಕಳವು, ಹಣಕಾಸು ವಂಚನೆ ಮತ್ತು ಆನ್‌ಲೈನ್ ಮೋಸ ಪ್ರಕರಣಗಳು ಹೆಚ್ಚಾಗುವ ಅಪಾಯವಿದೆ ಎಂದು ಸರ್ಕಾರ ಕಳವಳ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ, ಹೊಸ ವೈಶಿಷ್ಟ್ಯದಿಂದ ಬಳಕೆದಾರರ ಸುರಕ್ಷತೆ ಮತ್ತು ಗೌಪ್ಯತೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಮೆಟಾದಿಂದ ಬರುವ ವರದಿಯ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.