ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ಗಳಲ್ಲಿ ಒಂದಾದ ವಾಟ್ಸಾಪ್ ತನ್ನ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೊಸ ಫೀಚರ್ ಅನ್ನು ಘೋಷಿಸಿದೆ. ಇನ್ನು ಮುಂದೆ ಹೊಸ ವ್ಯಕ್ತಿಯೊಂದಿಗೆ ಚಾಟ್ ಮಾಡಲು ಅಥವಾ ಸಂಪರ್ಕ ಸಾಧಿಸಲು ಕಡ್ಡಾಯವಾಗಿ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳುವ ಅಗತ್ಯ ಇರುವುದಿಲ್ಲ.
ಕಂಪನಿಯು ಪರಿಚಯಿಸುತ್ತಿರುವ ಹೊಸ ವ್ಯವಸ್ಥೆಯಡಿ ಪ್ರತಿಯೊಬ್ಬ ಬಳಕೆದಾರರು ತಮ್ಮದೇ ಆದ ವಿಶಿಷ್ಟ (Unique) ಯೂಸರ್ನೇಮ್ ಆಯ್ಕೆ ಮಾಡಿಕೊಳ್ಳಬಹುದು. ಇದೇ ಯೂಸರ್ನೇಮ್ ಮೂಲಕ ಇತರರು ಅವರನ್ನು ವಾಟ್ಸಾಪ್ನಲ್ಲಿ ಹುಡುಕಿ ಸಂಪರ್ಕಿಸಬಹುದಾಗಿದೆ. ಇದರಿಂದ ವೈಯಕ್ತಿಕ ಮೊಬೈಲ್ ಸಂಖ್ಯೆ ಸಾರ್ವಜನಿಕವಾಗುವುದನ್ನು ತಪ್ಪಿಸಬಹುದು.
ಹೊಸ ಫೀಚರ್ ಜಾರಿಯಾದ ಬಳಿಕ ದೊಡ್ಡ ಗ್ರೂಪ್ಗಳಿಗೆ ಸೇರಿಸಿದಾಗ ಅಥವಾ ಮೊದಲ ಬಾರಿಗೆ ಅಪರಿಚಿತ ವ್ಯಕ್ತಿ ಅಥವಾ ವ್ಯವಹಾರಕ್ಕೆ ಸಂದೇಶ ಕಳುಹಿಸುವ ಸಂದರ್ಭದಲ್ಲೂ ಫೋನ್ ಸಂಖ್ಯೆ ಸ್ವಯಂಚಾಲಿತವಾಗಿ ಕಾಣಿಸುವುದಿಲ್ಲ. ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಬದಲಾವಣೆ ತರಲಾಗಿದೆ ಎಂದು ಮೆಟಾ ತಿಳಿಸಿದೆ.
ಮೆಟಾ ಪ್ರಕಾರ, ಯಾರನ್ನಾದರೂ ಸಂಪರ್ಕಿಸಲು ಅವರ ನಿಖರವಾದ ಯೂಸರ್ನೇಮ್ ತಿಳಿದಿರಬೇಕು. ಯೂಸರ್ನೇಮ್ಗಳನ್ನು ಬ್ರೌಸ್ ಮಾಡುವ ಅಥವಾ ಸೂಚಿಸುವ ವ್ಯವಸ್ಥೆ ಇರುವುದಿಲ್ಲ. ಇದರಿಂದ ಅಪರಿಚಿತರಿಂದ ಅನಗತ್ಯ ಸಂಪರ್ಕಗಳ ಸಾಧ್ಯತೆಯೂ ಕಡಿಮೆಯಾಗಲಿದೆ.
ಪ್ರಸ್ತುತ ವಿಶ್ವದಾದ್ಯಂತ ಸುಮಾರು 300 ಕೋಟಿಗೂ ಹೆಚ್ಚು ಜನರು ವಾಟ್ಸಾಪ್ ಬಳಸುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ಒಂದೇ ರೀತಿಯ ಯೂಸರ್ನೇಮ್ ಸಿಗದ ಕಾರಣ, ಈ ಹೊಸ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೊಳಿಸಿ ಯೂಸರ್ನೇಮ್ ಕಾಯ್ದಿರಿಸುವ ಅವಕಾಶ ನೀಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಇದಲ್ಲದೆ, ಈಗಾಗಲೇ ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ನಲ್ಲಿ ಬಳಸುತ್ತಿರುವ ಯೂಸರ್ನೇಮ್ಗಳನ್ನು ವಾಟ್ಸಾಪ್ನಲ್ಲೂ ಬಳಸಲು ಸೃಷ್ಟಿಕರ್ತರು, ಸಣ್ಣ ಉದ್ಯಮಿಗಳು ಮತ್ತು ಸಂಸ್ಥೆಗಳಿಗೆ ಅವಕಾಶ ಕಲ್ಪಿಸುವ ಯೋಜನೆಯನ್ನೂ ಮೆಟಾ ಪ್ರಕಟಿಸಿದೆ.
ಈ ಹೊಸ ಅಪ್ಡೇಟ್ನಿಂದ ವಾಟ್ಸಾಪ್ ಬಳಕೆದಾರರ ಗೌಪ್ಯತೆ ಹೆಚ್ಚುವುದರ ಜೊತೆಗೆ ಅಪರಿಚಿತರೊಂದಿಗೆ ಸಂಪರ್ಕ ಸಾಧಿಸುವ ವಿಧಾನವೂ ಮತ್ತಷ್ಟು ಸುರಕ್ಷಿತವಾಗಲಿದೆ.

















