ಮಂಗಳೂರು: ಕರ್ನಾಟಕ ಅನುದಾನರಹಿತ ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಸಂಘ , ದಕ್ಷಿಣ ಕನ್ನಡ ಜಿಲ್ಲಾ ಕುಪ್ಮಾ ಸಮಿತಿ ಇದರ ಚಿಂತನಾ ಸಭೆಯು ಜೂ.23 ರಂದು ಸಂಜೆ 4:30 ಕ್ಕೆ ಮಂಗಳೂರಿನ ಹೋಟೇಲ್ ಓಶಿಯನ್ ಪರ್ಲ್ ನಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ರಾಜ್ಯ ಕುಪ್ಮಾ ಸಮಿತಿಯ ಅಧ್ಯಕ್ಷರಾದ ಡಾ.ಎಂ ಮೋಹನ್ ಆಳ್ವ ಅವರು ವಹಿಸಿಕೊಂಡಿದ್ದರು.
ನಡೆದ ಚಿಂತನಾ ಸಭೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರಗಳು ವಿಷಯದ ಮೇಲೆ
ಕುಪ್ಮಾ ರಾಜ್ಯ ಸಮಿತಿಯ ಕಾರ್ಯದರ್ಶಿ ಪ್ರೊ.ನರೇಂದ್ರ ಎಲ್ ನಾಯಕ್ ಅವರು ವಿವರವಾಗಿ ವಿವರಿಸಿದರು.
ಅವರು ಮಾತನಾಡುತ್ತ ಕುಪ್ಮಾ ಸಂಘಟನೆಯನ್ನು ಸಂಘಟಿಸಿರುವ ಕಾರಣ ಮ್ಯಾನೇಜ್ಮೆಂಟ್ ಗಳ ನಡುವೆ ಯಾವುದೇ ರೀತಿಯ ತಪ್ಪು
ತಿಳುವಳಿಕೆಗಳಿದ್ದರೆ ಅದು ಕಡಿಮೆಯಾಗುತ್ತದೆ. ಒಬ್ಬರಿಗೊಬ್ಬರು ತಮ್ಮ ಸಮಸ್ಯೆಗಳನ್ನು ಆಲಿಸುವ ಮತ್ತು ಬಗೆಹರಿಸಿಕೊಳ್ಳುವ,
ಆಪ್ತವಾಗಿ ಹಂಚಿಕೊಳ್ಳುವ ಒಂದು ಒಳ್ಳೆಯ ವೇದಿಕೆಯಾಗಿದೆ. ಕುಪ್ಮಾ ಸಂಘಟನೆಯನ್ನು ಕಟ್ಟುವುದಕ್ಕಿಂತ ಮುಂಚೆ ನಮ್ಮೆಲ್ಲರ
ನಡುವೆ ಒಂದು ರೀತಿಯ ತಪ್ಪುತಿಳುವಳಿಕೆಗಳಿದ್ದವು ಅದು ಕುಪ್ಮಾವನ್ನು ಸಂಘಟಿಸಿದ ಕಾರಣ ದೂರವಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ
ಕಾಲಕಾಲಕ್ಕೆ ಹಲವಾರು ಬದಲಾವಣೆಗಳು ಬಂದ ಕಾರಣ ಅದರದ್ದೇ ಆದ ಸಮಸ್ಯೆಗಳು ಸಹ ಉದ್ಭವವಾಗುತ್ತವೆ. ಆ ಸಮಸ್ಯೆಗಳನ್ನು
ಕುಪ್ಮಾದ ಮೂಲಕ ಬಗೆಹರಿಸಿಕೊಂಡಿದ್ದೇವೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಆಡಳಿತ ಮಂಡಳಿಯವರು ಕಾನೂನಿನಡಿಯಲ್ಲಿಯೇ
ಕ್ರಮಬದ್ಧವಾಗಿ ನಡೆದರೆ ಉತ್ತಮ ಶಿಕ್ಷಣ ಸಂಸ್ಥೆಯನ್ನು ಕಟ್ಟಲು ಸಾಧ್ಯ. ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಗುಣಮಟ್ಟದ, ಪರಿಣಾಮಕಾರಿ ಶಿಕ್ಷಣವನ್ನು ನೀಡಿದರೆ ಖಂಡಿತವಾಗಿ ಶಿಕ್ಷಣ ಸಂಸ್ಥೆಗಳು ಬೆಳೆಯಲು ವಿಪುಲವಾದ ಅವಕಾಶಗಳು ಇವೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಸ್ತುತಪಡಿಸುವ ಟಿಸಿ ಯನ್ನು ಡಿಜಿಲಾಕರ್ ನ ಮೂಲಕ ವಿದ್ಯಾರ್ಥಿಗಳಿಗೆ ನೇರವಾಗಿ ನೀಡುವರೇ ಪಪೂ ಶಿಕ್ಷಣ
ಇಲಾಖೆಯು ಕ್ರಮವನ್ನು ಕೈಗೊಂಡಾಗ ಕುಪ್ಮಾ ಇದನ್ನು ವಿರೋಧಿಸಿ ಉತ್ತರಿಸುವ ಮೂಲಕ ಇಂದು ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಿಗೆ ಈ ಕ್ರಮವು ಅನ್ವಯಿಸುವುದಿಲ್ಲ ಎಂದು ಈಗಾಗಲೇ ಶಿಕ್ಷಣ ಇಲಾಖೆಯು ಸ್ಪಷ್ಟಪಡಿಸಿರುವುದು ಕುಪ್ಮಾ ಮಾಡಿರುವ ಒಳ್ಳೆಯ ಕೆಲಸದ ಪ್ರತೀತವಾಗಿದೆ. ಆಡಳಿತ್ಮಾಕವಾಗಿ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳಿಗೂ ಅವರದ್ದೇ ಆದ ಸವಾಲು ಇರುತ್ತವೆ. ಆ ಸವಾಲುಗಳನ್ನು ಎದುರಿಸಲು ಎಲ್ಲಾ ಶಿಕ್ಷಣ ಸಂಸ್ಥೆಗಳು ಸಮರ್ಥವಾಗಿದೆ. ಆದರೆ ಆ ಸಮಸ್ಯೆಗಳು
ಸಾಮೂಹಿಕವಾಗಿದ್ದಾಗ ಕುಪ್ಮಾದಂತಹ ಸಂಘಟನೆ ಅಗತ್ಯವಾಗಿ ಬೇಕು. ಶಿಕ್ಷಣ ಸಂಸ್ಥೆಗಳಿಗೆ ಸಮಸ್ಯೆ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ಪ್ರತಿ ಕಾಲೇಜುಗಳು ಫಲಿತಾಂಶವನ್ನು ಪ್ರಕಟಿಸುವಾಗ ಏಕರೂಪದ ಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕ
ಸಮಾಜದಲ್ಲಿ ನೈತಿಕತೆಯನ್ನು ಪ್ರದರ್ಶಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಒಳ್ಳೆಯ ಮೂಲಭೂತ ಸೌಕರ್ಯಗಳು ಗುಣಮಟ್ಟದ ಶಿಕ್ಷಣ ಇದ್ದಾಗ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಗುಣಮಟ್ಟವನ್ನು
ಕಾಯ್ದುಕೊಳ್ಳುವಲ್ಲಿ ಶಿಕ್ಷಣ ಸಂಸ್ಥೆಗಳು ಅಪಾರ ಪರಿಶ್ರಮವನ್ನು ಪಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ ಎಂ ಮೋಹನ್ ಆಳ್ವ ಅವರು ಕುಪ್ಮಾ ಎಂದಿಗೂ ಹೋರಾಟವನ್ನು ಮಾಡಲು ಬಯಸುವುದಿಲ್ಲ ಬದಲಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಕಾರದೊಂದಿಗೆ ಸಹಕಾರವನ್ನು
ಬಯಸುತ್ತೇವೆ. ಸಂಘರ್ಷವಿಲ್ಲದೆ ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಕಾರ್ಯ ಆಗಬೇಕು. ಖಾಸಗಿ ಶಿಕ್ಷಣ
ಸಂಸ್ಥೆಗಳಿಗೆ ಇಂದು ಹಲವಾರು ಗಂಭೀರವಾದ ಸಮಸ್ಯೆಗಳು ಇವೆ. ಅವುಗಳನ್ನು ಬಗೆಹರಿಸಲು ಸರ್ಕಾರವು ಉತ್ತಮವಾಗಿ
ಸ್ಪಂದಿಸಬೇಕು. ಸಾರಿಗೆ ಇಲಾಖೆ, ಅರಣ್ಯ ಇಲಾಖೆ, ವಸತಿ ಇಲಾಖೆ , ಪರಿಸರ ಇಲಾಖೆ ಹೀಗೆ ಬೇರೆಬೇರೆ ಸರಕಾರಿ ಇಲಾಖೆಗಳು
ಅನಗತ್ಯವಾಗಿ ಶಿಕ್ಷಣ ಸಂಸ್ಥೆಗಳಿಗೆ ತೊಂದರೆಯನ್ನು ನೀಡಬಾರದು. ಶಿಕ್ಷಣ ಸಂಸ್ಥೆಗಳು ತಪ್ಪಿದಾಗ ಸೂಕ್ತವಾದ ಪರಿಹಾರಗಳೊಂದಿಗೆ
ಮಾರ್ಗದರ್ಶನವನ್ನು ನೀಡಬೇಕು. ಸರ್ಕಾರವು ವಿದ್ಯಾರ್ಥಿಗಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು
ನೀಡಬೇಕು. ಮುಂದಿನ ದಿನಗಳಲ್ಲಿ ಕುಪ್ಮಾ ಸಂಘಟನೆಯು ಜಿಲ್ಲೆಯ ಕನಿಷ್ಠ ಕುಪ್ಮಾದ ಸದಸ್ಯ ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್, ಕೆ -ಸಿಇಟಿ, ಜೆಇಇ ಮೌಖಿಕ ಪರೀಕ್ಷೆಯನ್ನು ಏಕಕಾಲಕ್ಕೆ ನಡೆಸುವ ಮೂಲಕ ವಿದ್ಯಾರ್ಥಿ ಸಮೂಹಕ್ಕೆ ಸಹಾಯ
ಆಗಬೇಕು ಎಂದು ಹೇಳಿದರು.
ರಾಜ್ಯ ಸಮಿತಿಯ ಗೌರವ ಅಧ್ಯಕ್ಷರಾದ ಡಾ ಎಂ ಬಿ ಪುರಾಣಿಕ್ ಅವರು ಮಾತನಾಡುತ್ತ ನಗರದಲ್ಲಿ ಮತ್ತು ಗ್ರಾಮ ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರ ವಿಧಿಸುವ ತೆರಿಗೆಯಲ್ಲಿ ಭಿನ್ನತೆ ಇದೆ ಅದನ್ನು ಸರಕಾರವು ತಕ್ಷಣಕ್ಕೆ ಸ್ಪಂದಿಸುವ ಮೂಲಕ ಪರಿಹಾರವನ್ನು ನೀಡಬೇಕು ಮತ್ತು ಎಸ್ ಟಿಪಿ ಯನ್ನು ಶಿಕ್ಷಣ ಸಂಸ್ಥೆಗಳಲ್ಲಿ ಅಳವಡಿಸುವಾಗ ಅದು ಶಿಕ್ಷಣ ಸಂಸ್ಥೆಗೆಳಿಗ ಹೊರೆಯಾಗದಂತೆ ಇಲಾಖೆಗಳು ಇದಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕುಪ್ಮಾ ಸಮಿತಿಯ ಗೌರವ ಅಧ್ಯಕ್ಷರಾದ ಡಾ ಸಂಜೀವ ರೈ, ಜಿಲ್ಲಾಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿಗಳಾದ ಡಾ ಮಂಜುನಾಥ್ ರೇವಣ್ಕರ್, ಸೇರಿದಂತೆ ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯರು
ಮತ್ತು ಜಿಲ್ಲಾ ಕುಪ್ಮಾ ಸಮಿತಿಯ ಪದಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಅನುದಾನರಹಿತ ಕಾಲೇಜುಗಳ ಅಧ್ಯಕ್ಷರು,
ಕಾರ್ಯದರ್ಶಿಗಳು ಈ ಸಭೆಯಲ್ಲಿ ಭಾಗವಹಿಸುವ ಮೂಲಕ ಸೂಕ್ತವಾದ ಸಲಹೆ ಸೂಚನೆಗಳನ್ನು ನೀಡಿದರು.
ವಾಣಿ ಕಾಲೇಜಿನ ಆಡಳಿತ ಮಂಡಳಿಯವರು ಕಾಲೇಜು ಬಸ್ಸುಗಳಲ್ಲಿ ಅಳವಡಿಸುವ ಪ್ಯಾನಿಕ್ ಬಟನ್ ಗಳ ವಾರ್ಷಿಕ ನಿರ್ವಹಣೆ ಕಷ್ಟ ಮತ್ತು ಅದರ ವೆಚ್ಚ ಅಧಿಕವಾಗಿದ್ದು ಈ ಬಗ್ಗೆ ಸಾರಿಗೆ ಇಲಾಖೆ ತಕ್ಷಣ ಸ್ಪಂದಿಸುವ ಮೂಲಕ ಈ ಸಮಸ್ಯೆಯನ್ನು
ಬಗೆಹರಿಸಬೇಕೆಂದು ಎಲ್ಲರ ಗಮನಸೆಳೆದರು.
ದಕ್ಷಿಣ ಕನ್ನಡ ಜಿಲ್ಲಾ ಕುಪ್ಮಾ ಜಿಲ್ಲಾಧ್ಯಕ್ಷರಾದ ಯುವರಾಜ್ ಜೈನ್ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ
ಸ್ವಾಗತಿಸಿದರು. ಉಪನ್ಯಾಸಕ ಕರುಣಾಕರ ಬಳ್ಕೂರು ಕಾರ್ಯಕ್ರಮ ನಿರೂಪಿಸಿ , ವಂದಿಸಿದರು.

















