ಬೆಂಗಳೂರು: ಪತಿಗಿಂತ ಹೆಚ್ಚಿನ ಆದಾಯ ಹೊಂದಿರುವ ಪತ್ನಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
2024ರಲ್ಲಿ ವಿವಾಹವಾಗಿದ್ದ ದಂಪತಿ ಕೆಲವೇ ತಿಂಗಳಲ್ಲಿ ಪ್ರತ್ಯೇಕವಾಗಿದ್ದರು. ಬಳಿಕ ಪತ್ನಿ ಜೀವನಾಂಶ ಕೋರಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆಯ ವೇಳೆ, ಪತಿಯ ಮಾಸಿಕ ಆದಾಯ 60,646 ರೂ. ಇದ್ದರೆ, ಪತ್ನಿಯ ಮಾಸಿಕ ಆದಾಯ 1 ಲಕ್ಷ ರೂ. ಎಂಬುದು ದಾಖಲೆಗಳಿಂದ ಸ್ಪಷ್ಟವಾಗಿತ್ತು.
ಆದರೂ, ವಿಚಾರಣಾ ನ್ಯಾಯಾಲಯವು ಪತಿಗೆ ಪ್ರತಿ ತಿಂಗಳು 20,000 ರೂ. ಜೀವನಾಂಶ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತಿ ಕರ್ನಾಟಕ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್, ಪತ್ನಿ ತಿಂಗಳಿಗೆ 1 ಲಕ್ಷ ರೂ. ಸಂಬಳ ಪಡೆಯುತ್ತಿರುವುದರಿಂದ ತನ್ನ ಜೀವನ ನಿರ್ವಹಣೆಯನ್ನು ಸ್ವತಃ ಮಾಡಿಕೊಳ್ಳಲು ಸಮರ್ಥಳಾಗಿದ್ದಾಳೆ ಎಂದು ಅಭಿಪ್ರಾಯಪಟ್ಟಿತು. ಪತಿಯ ಆದಾಯವೇ ಪತ್ನಿಗಿಂತ ಕಡಿಮೆಯಿರುವ ಸಂದರ್ಭದಲ್ಲಿ ಪತಿ ಜೀವನಾಂಶ ನೀಡಲು ಬಾಧ್ಯನಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಇದಲ್ಲದೆ, ಪತ್ನಿಯ ಮೇಲೆ ಮಕ್ಕಳು ಅಥವಾ ಇತರ ಯಾವುದೇ ಅವಲಂಬಿತರ ಜವಾಬ್ದಾರಿ ಇಲ್ಲ ಎಂಬ ಅಂಶವನ್ನೂ ಪರಿಗಣಿಸಿದ ಹೈಕೋರ್ಟ್, ಜೀವನಾಂಶ ನೀಡುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಿದೆ.

















