ಇಂದು ರಾಷ್ಟ್ರೀಯ ವೈದ್ಯರ ದಿನ: ವೈದ್ಯರ ಸೇವೆಗೆ ಗೌರವ ಸಲ್ಲಿಸುವ ವಿಶೇಷ ದಿನವಿದು!

ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಮೊದಲ ಬಾರಿಗೆ 1991ರಲ್ಲಿ ಆಚರಿಸಲಾಯಿತು. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಹಾಗೂ ಖ್ಯಾತ ವೈದ್ಯ ಡಾ. ಬಿಧನ್ ಚಂದ್ರ ರಾಯ್ ಅವರ ವೈದ್ಯಕೀಯ ಕ್ಷೇತ್ರದ ಅಪಾರ ಕೊಡುಗೆಯನ್ನು ಗೌರವಿಸಿ, ಅವರ ಸ್ಮರಣಾರ್ಥವಾಗಿ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸುವ ಸಂಪ್ರದಾಯ ಆರಂಭವಾಯಿತು. ವಿಶೇಷವೆಂದರೆ, ಡಾ. ಬಿಧನ್ ಚಂದ್ರ ರಾಯ್ ಅವರ ಜನ್ಮದಿನ ಹಾಗೂ ಪುಣ್ಯತಿಥಿ ಎರಡೂ ಜುಲೈ 1ರಂದೇ ಆಗಿರುವುದು ಈ ದಿನದ ವಿಶೇಷತೆಗೆ ಕಾರಣವಾಗಿದೆ.

ವೈದ್ಯರ ದಿನ ಎನ್ನುವ ಹೆಮ್ಮೆ:

ಡಾ. ಬಿಧನ್ ಚಂದ್ರ ರಾಯ್ ಅವರು ಭಾರತೀಯ ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಬಲವರ್ಧನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚಿಸುವಲ್ಲಿ ಅವರ ಸೇವೆ ಸ್ಮರಣೀಯವಾಗಿದೆ.

ಪ್ರತಿ ವರ್ಷ ಭಾರತೀಯ ವೈದ್ಯಕೀಯ ಸಂಘವು ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ವೈದ್ಯರು ಮತ್ತು ಆರೋಗ್ಯ ವೃತ್ತಿಪರರನ್ನು ಸನ್ಮಾನಿಸುತ್ತದೆ. ಸಮಾಜದ ಆರೋಗ್ಯ ರಕ್ಷಣೆಯಲ್ಲಿ ವೈದ್ಯರು ಸಲ್ಲಿಸುತ್ತಿರುವ ಸೇವೆಯನ್ನು ಈ ದಿನ ವಿಶೇಷವಾಗಿ ಸ್ಮರಿಸಲಾಗುತ್ತದೆ.

ಭಾರತ ಮಾತ್ರವಲ್ಲದೆ ವಿಶ್ವದ ಹಲವು ರಾಷ್ಟ್ರಗಳಲ್ಲಿಯೂ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಆದರೆ ಪ್ರತಿ ದೇಶದಲ್ಲಿ ದಿನಾಂಕ ವಿಭಿನ್ನವಾಗಿದೆ. ಭಾರತದಲ್ಲಿ ಜುಲೈ 1ರಂದು, ಅಮೆರಿಕದಲ್ಲಿ ಮಾರ್ಚ್ 30ರಂದು, ಕ್ಯೂಬಾದಲ್ಲಿ ಡಿಸೆಂಬರ್ 3ರಂದು ಹಾಗೂ ಇರಾನ್‌ನಲ್ಲಿ ಆಗಸ್ಟ್ 23ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ.

ವೈದ್ಯರ ಸೇವೆ ಕೇವಲ ಒಂದು ವೃತ್ತಿಯಲ್ಲ, ಅದು ಮಾನವೀಯತೆಯ ಪ್ರತೀಕವಾಗಿದೆ. ಅನಾರೋಗ್ಯದ ಸಂದರ್ಭದಲ್ಲಿ ಜೀವ ಉಳಿಸಲು ಹಗಲಿರುಳು ಶ್ರಮಿಸುವ ವೈದ್ಯರಿಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ರಾಷ್ಟ್ರೀಯ ವೈದ್ಯರ ದಿನವು ಅವರ ಸೇವೆಯನ್ನು ಗೌರವಿಸುವುದರ ಜೊತೆಗೆ ಸಮಾಜದಲ್ಲಿ ವೈದ್ಯರ ಮೇಲಿನ ವಿಶ್ವಾಸ ಮತ್ತು ಗೌರವವನ್ನು ಮತ್ತಷ್ಟು ಬಲಪಡಿಸುವ ದಿನವಾಗಿದೆ.