ನವದೆಹಲಿ: ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಜ್ಞರ ವರದಿಗಳ ಪ್ರಕಾರ, 2030ರ ವೇಳೆಗೆ ಪ್ರತಿ 9 ರಿಂದ 10 ಭಾರತೀಯರಲ್ಲಿ ಒಬ್ಬರಿಗೆ ಕ್ಯಾನ್ಸರ್ ಬರುವ ಅಪಾಯ ಎದುರಾಗುವ ಸಾಧ್ಯತೆಯಿದೆ.ಇದೊಂದು ಶಾಕಿಂಗ್ ಸುದ್ದಿ.
ತಜ್ಞರ ಪ್ರಕಾರ, ವಯಸ್ಸಾದ ಜನಸಂಖ್ಯೆಯ ಹೆಚ್ಚಳ, ಬದಲಾಗುತ್ತಿರುವ ಜೀವನಶೈಲಿ, ಪರಿಸರ ಮಾಲಿನ್ಯ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಮಾನಸಿಕ ಒತ್ತಡ ಕ್ಯಾನ್ಸರ್ ಪ್ರಕರಣಗಳು ಹೆಚ್ಚಲು ಪ್ರಮುಖ ಕಾರಣಗಳಾಗಿವೆ. 2030ರ ವೇಳೆಗೆ ದೇಶದಲ್ಲಿ ವಾರ್ಷಿಕ ಹೊಸ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 1.57 ಮಿಲಿಯನ್‌ನಿಂದ 2 ಮಿಲಿಯನ್‌ಗೆ ತಲುಪುವ ಸಾಧ್ಯತೆಯಿದೆ.
ಭಾರತದಲ್ಲಿ ಶೇಕಡಾ 70ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ಮೂರನೇ ಮತ್ತು ನಾಲ್ಕನೇ ಹಂತದಲ್ಲಿ ಪತ್ತೆಯಾಗುತ್ತಿರುವುದು ಚಿಕಿತ್ಸೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿದೆ. ಪುರುಷರಲ್ಲಿ ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್ ಹೆಚ್ಚಾಗಿ ಕಂಡುಬಂದರೆ, ಮಹಿಳೆಯರಲ್ಲಿ ಸ್ತನ, ಗರ್ಭಕಂಠ ಹಾಗೂ ಅಂಡಾಶಯದ ಕ್ಯಾನ್ಸರ್ ಸಾಮಾನ್ಯವಾಗಿದೆ.
ಈ ಹಿಂದೆ ಕ್ಯಾನ್ಸರ್ ಅನ್ನು ವೃದ್ಧಾಪ್ಯದ ಕಾಯಿಲೆ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಧೂಮಪಾನ ಮಾಡದ ಯುವಕರು ಹಾಗೂ ಮಹಿಳೆಯರಲ್ಲಿಯೂ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವುದು ವೈದ್ಯರನ್ನು ಆತಂಕಕ್ಕೀಡು ಮಾಡಿದೆ. ವಾಯು ಮಾಲಿನ್ಯ, ಅಪೌಷ್ಟಿಕ ಆಹಾರ ಮತ್ತು ನಿರಂತರ ಒತ್ತಡವೂ ಪ್ರಮುಖ ಅಪಾಯಕಾರಿ ಅಂಶಗಳಾಗಿ ಗುರುತಿಸಲಾಗಿದೆ.

ತಂಬಾಕಿನಿಂದ ಆದಷ್ಟು ದೂರವಿರಿ:
ತಜ್ಞರ ಪ್ರಕಾರ, ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲದಿದ್ದರೂ, ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ತಂಬಾಕು ಮತ್ತು ಮದ್ಯಪಾನದಿಂದ ದೂರವಿರುವುದು, ಆರೋಗ್ಯಕರ ಜೀವನಶೈಲಿ ಅನುಸರಿಸುವುದು, ನಿಯಮಿತ ವ್ಯಾಯಾಮ ಮಾಡುವುದು ಹಾಗೂ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ.
40 ವರ್ಷ ಮೇಲ್ಪಟ್ಟ ಮಹಿಳೆಯರು ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಯಾದರೆ ಚಿಕಿತ್ಸೆ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇದರ ಜೊತೆಗೆ ಕ್ಯಾನ್ಸರ್ ಚಿಕಿತ್ಸೆಯ ವೆಚ್ಚ ಲಕ್ಷಾಂತರ ರೂಪಾಯಿಗಳಾಗುವ ಕಾರಣ, ಸಮರ್ಪಕ ಆರೋಗ್ಯ ವಿಮೆ ಹಾಗೂ ಗಂಭೀರ ಅನಾರೋಗ್ಯ ವಿಮಾ ಯೋಜನೆ ಹೊಂದಿರುವುದು ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ರಕ್ಷಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

















