ಮೂಕ ಜೀವಿಗಳಿಗಾಗಿ ಸದಾ ಮಿಡಿಯುವ ಮನಸ್ಸು, ಸೇವೆಯನ್ನೇ ಬದುಕಾಗಿಸಿಕೊಂಡ ಅಪರೂಪದ ಪಶುವೈದ್ಯ ಡಾ. ನಾಗರಾಜ ಮರವಂತೆ ಅವರ ಮಾದರಿ ಲೈಫು!

ಡಾ. ನಾಗರಾಜ ಮರವಂತೆ ಬಗ್ಗೆ ಒಂದಿಷ್ಟು:

ಬಡ ಕುಟುಂಬದಲ್ಲಿ ಜನಿಸಿದ ಡಾ. ನಾಗರಾಜ ಮರವಂತೆ ಅವರು ಬದುಕಿನ ಕಷ್ಟಗಳನ್ನು ಹತ್ತಿರದಿಂದ ಕಂಡವರು. ಅದೇ ಅನುಭವ ಅವರಲ್ಲಿ ಮಾನವೀಯತೆಯ ಮೌಲ್ಯವನ್ನು ಬೆಳೆಸಿದೆ. ಅವರು ಕೇವಲ ಮನುಷ್ಯರ ನೋವಿಗಷ್ಟೇ ಅಲ್ಲ, ಮಾತನಾಡಲಾರದ ಮೂಕ ಪ್ರಾಣಿಗಳ ಸಂಕಷ್ಟಕ್ಕೂ ತಕ್ಷಣ ಸ್ಪಂದಿಸುತ್ತಾರೆ.

ಅವರ ಹೆಗಲ ಮೇಲಿರುವ ವೈದ್ಯಕೀಯ ಬ್ಯಾಗ್ ಅನೇಕ ಪ್ರಾಣಿಗಳಿಗೆ ಜೀವದಾನ ನೀಡುವ ಕಿಟ್‌ವೇ ಸರಿ. ತುರ್ತು ಚಿಕಿತ್ಸೆಗೆ ಅಗತ್ಯವಾದ ಔಷಧಗಳು, ಇಂಜೆಕ್ಷನ್‌ಗಳು ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಸದಾ ತಮ್ಮೊಂದಿಗೆ ಇಟ್ಟುಕೊಂಡಿರುವ ಅವರು, ಅಪಘಾತ ಅಥವಾ ತುರ್ತು ಪರಿಸ್ಥಿತಿಯ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಧಾವಿಸುತ್ತಾರೆ.

ಮೂಕ ಜೀವಿಗಳಿಗೆ ಹೊಸ ಬದುಕು:

ಕುಂದಾಪುರ ಮತ್ತು ಬೈಂದೂರು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ವಿಭಜಕಗಳ ಬಳಿ ಬೆಳೆದ ಹುಲ್ಲಿಗಾಗಿ ಬರುವ ದನಗಳು ವಾಹನಗಳಿಗೆ ಸಿಲುಕಿ ಗಾಯಗೊಳ್ಳುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಅನೇಕರು ನಿರ್ಲಕ್ಷ್ಯ ವಹಿಸಿದರೂ, ಡಾ. ನಾಗರಾಜ ಮರವಂತೆ ಅವರು ಮಳೆ, ಬಿಸಿಲು, ಮಧ್ಯರಾತ್ರಿ ಅಥವಾ ಮುಂಜಾನೆ ಎಂಬ ಭೇದವಿಲ್ಲದೆ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಿ ಮೂಕ ಜೀವಗಳ ಜೀವ ಉಳಿಸುತ್ತಿದ್ದಾರೆ.

ಸರ್ಕಾರಿ ಕರ್ತವ್ಯದ ಮಿತಿಯನ್ನು ಮೀರಿ, ವೈಯಕ್ತಿಕ ಸಮಯವನ್ನೂ ತ್ಯಾಗ ಮಾಡಿ ಅವರು ಸಲ್ಲಿಸುತ್ತಿರುವ ಸೇವೆ ಗಮನಾರ್ಹವಾಗಿದೆ. ಇದುವರೆಗೆ ಸುಮಾರು 12 ಸಾವಿರಕ್ಕೂ ಹೆಚ್ಚು ದನಗಳಿಗೆ ಚಿಕಿತ್ಸೆ ನೀಡಿರುವ ಅವರು, ಸಾವಿರಾರು ರೈತ ಕುಟುಂಬಗಳ ಆರ್ಥಿಕ ನಷ್ಟ ತಪ್ಪಿಸುವುದರ ಜೊತೆಗೆ ಸಾವಿರಾರು ಮೂಕ ಜೀವಗಳಿಗೆ ಹೊಸ ಬದುಕು ನೀಡಿದ್ದಾರೆ.

ಅರಿವು ನೀಡುವ ಕಾರ್ಯಕ್ರಮ:

ಚಿಕಿತ್ಸೆಯಷ್ಟೇ ಅಲ್ಲದೆ, ಜಾಗೃತಿ ಮೂಡಿಸುವ ಕಾರ್ಯದಲ್ಲೂ ಅವರು ಮುಂಚೂಣಿಯಲ್ಲಿದ್ದಾರೆ. ಗ್ರಾಮಸಭೆಗಳಲ್ಲಿ ಭಾಗವಹಿಸಿ ಪಶುಸಂಗೋಪನೆ, ಜಾನುವಾರುಗಳ ಆರೋಗ್ಯ, ರೋಗ ನಿಯಂತ್ರಣ ಹಾಗೂ ಲಸಿಕೆಗಳ ಮಹತ್ವ ಕುರಿತು ಮಾಹಿತಿ ನೀಡುತ್ತಾರೆ. ಈ ವರ್ಷ ರೇಬೀಸ್ ಕುರಿತು ಸುಮಾರು 2,500 ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಕ್ಕಳಲ್ಲಿ ಆರೋಗ್ಯ ಜಾಗೃತಿ ಮೂಡಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಐವರು ಪಶುಸಖಿಯರ ಸಹಕಾರದೊಂದಿಗೆ ಮನೆಮನೆಗೆ ತೆರಳಿ ಪ್ರಾಣಿಗಳ ಆರೈಕೆ, ಲಸಿಕೆ, ಆರೋಗ್ಯ ಹಾಗೂ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ. ಈ ಮೂಲಕ ಆರೋಗ್ಯಕರ ಗ್ರಾಮಗಳ ನಿರ್ಮಾಣಕ್ಕೆ ಅವರು ಶ್ರಮಿಸುತ್ತಿದ್ದಾರೆ.

ಪ್ರಶಸ್ತಿ, ಪ್ರಚಾರ ಅಥವಾ ಗೌರವಕ್ಕಿಂತ ಒಂದು ಮೂಕ ಜೀವದ ಪ್ರಾಣ ಉಳಿಯುವುದೇ ತಮ್ಮ ದೊಡ್ಡ ಸಂತೋಷ ಎಂದು ನಂಬಿರುವ ಡಾ. ನಾಗರಾಜ ಮರವಂತೆ ಅವರು, ಸೇವಾಭಾವ, ಮಾನವೀಯತೆ ಮತ್ತು ಕರ್ತವ್ಯನಿಷ್ಠೆಯ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮೂಕ ಜೀವಿಗಳ ಮೇಲಿನ ಕಾಳಜಿ ಮತ್ತು ಸಮಾಜಮುಖಿ ಚಿಂತನೆಯಿಂದ ಅವರು ಸಾಮಾನ್ಯ ಪಶುವೈದ್ಯರಿಗಿಂತ ವಿಭಿನ್ನ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದಾರೆ.