ಬೆಂಗಳೂರು: ರಾಜ್ಯದ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದ್ದು, ಇನ್ನು ಮುಂದೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶನಿವಾರದ ಶಾಲಾ ಅವಧಿಗೆ ಏಕರೂಪದ ವೇಳಾಪಟ್ಟಿಯನ್ನು ಜಾರಿಗೊಳಿಸಿದೆ.
ಹೊಸ ಆದೇಶದಂತೆ, ಇನ್ನು ಮುಂದೆ ಪ್ರತಿ ಶನಿವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ಮಾತ್ರ ತರಗತಿಗಳು ನಡೆಯಲಿವೆ. ಈವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶನಿವಾರದ ಶಾಲಾ ಸಮಯದಲ್ಲಿ ವ್ಯತ್ಯಾಸವಿದ್ದು, ಕೆಲವು ಶಾಲೆಗಳಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ, ಇನ್ನೂ ಕೆಲವು ಶಾಲೆಗಳಲ್ಲಿ ಬೆಳಿಗ್ಗೆ 7.30ರಿಂದ 11.30ರವರೆಗೆ ತರಗತಿಗಳು ನಡೆಯುತ್ತಿದ್ದವು.
ಈ ಗೊಂದಲಕ್ಕೆ ತೆರೆ ಎಳೆಯಲು ಶಾಲಾ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಒಂದೇ ವೇಳಾಪಟ್ಟಿಯನ್ನು ಅನುಸರಿಸುವಂತೆ ಸೂಚಿಸಿದೆ.
ಹೊಸ ವೇಳಾಪಟ್ಟಿಯಿಂದ ವಿದ್ಯಾರ್ಥಿಗಳು ಶನಿವಾರ ಅತಿ ಬೇಗ ಎದ್ದು ಶಾಲೆಗೆ ತೆರಳುವ ಅಗತ್ಯ ಇರುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರ ಜೊತೆಗೆ ಸ್ವಲ್ಪ ನೆಮ್ಮದಿಯೂ ದೊರೆಯಲಿದೆ ಎಂದು ಇಲಾಖೆ ತಿಳಿಸಿದೆ.
ಇದೇ ವೇಳೆ, ಶಿಕ್ಷಕರಿಗೂ ಈ ಬದಲಾವಣೆ ಸಹಕಾರಿಯಾಗಲಿದ್ದು, ಸರ್ಕಾರ ಈಗಾಗಲೇ ಕಡ್ಡಾಯಗೊಳಿಸಿರುವ ಆನ್ಲೈನ್ ಹಾಜರಾತಿಯನ್ನು ಸಮಯಕ್ಕೆ ಸರಿಯಾಗಿ ದಾಖಲಿಸಲು ಹೊಸ ವೇಳಾಪಟ್ಟಿ ನೆರವಾಗಲಿದೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.















