ಮಂಗಳೂರು:ರೋಹನ್ ಕಾರ್ಪೊರೇಷನ್‌ನ ಕಾರ್ಯಕ್ರಮದಲ್ಲಿ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಜಾದೂ!

ಮಂಗಳೂರು: ಖ್ಯಾತ ನಿರ್ಮಾಣ ಸಂಸ್ಥೆ ರೋಹನ್ ಕಾರ್ಪೊರೇಷನ್ ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಗುರುವಾರ ಸಂಜೆ ಆನ್ ಇನ್ನಿಂಗ್ ವಿತ್ ಶಾರುಖ್ ಖಾನ್ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಪಾಲ್ಗೊಂಡು, ಮಾತನಾಡಿದರು.
ಚಿಕ್ಕಂದಿನಲ್ಲಿ ಕೆಲ ಕಾಲ ಮಂಗಳೂರಿನಲ್ಲಿದ್ದರೂ ಕಿಂಗ್ ಖಾನ್ ಆದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಭೇಟಿ ನೀಡುತ್ತಿರುವ ಶಾರುಖ್ ಮಂಗಳೂರಿನ ಅಭಿಮಾನಿಗಳ ಪ್ರೀತಿ, ಅಭಿಮಾನಕ್ಕೆ ಫಿದಾ ಆದರು.

ಮಂಗಳೂರು ಸುಂದರವಾದ ನಗರ. ನಾನು ವಿಮಾನ ನಿಲ್ದಾಣದಲ್ಲಿ ಇಳಿದು, ಈ ವೇದಿಕೆಗೆ ಬರುವ ವರೆಗೂ ನನಗೆ ನೀವು ಪ್ರೀತಿ ತೋರಿದ್ದೀರಿ, ರೋಹನ್ ಕಾರ್ಪೊರೇಷನ್‌ನವರು ಸುರತ್ಕಲ್‌ನ ಕಡಲ ಕಿನಾರೆಯಲ್ಲಿ ಸಮುದ್ರಾಭಿಮುಖವಾದ ಮರೀನಾ ಒನ್ ಯೋಜನೆಯನ್ನು ರೂಪಿಸುತ್ತಿರುವುದು ಮತ್ತಷ್ಟು ಖುಷಿ, ಮಂಗಳೂರಿನಲ್ಲಿ ಕೆಲ ಸಮಯ ಕಳೆಯುವುದು, ಇಲ್ಲಿನ ನೀರು ದೋಸೆ ಸವಿಯುವುದು ನನಗಿಷ್ಟ ಎಂದರು.


ಮಂಗಳೂರು ತನ್ನದೇ ಆದ ಸಂಸ್ಕೃತಿಯಿಂದ ಎಲ್ಲರ ಗಮನ ಸೆಳೆಯುತ್ತದೆ, ಮುಂಬಯಿನಲ್ಲೂ ಬಹಳ ಮಂದಿ ಮಂಗಳೂರಿನವರು ನೆಲೆಸಿದ್ದಾರೆ. ನಾನು ಆಗಾಗ ಮುಂಬಯಿನಿಂದ ಇಲ್ಲಿಗೆ ಬರಲು ಬಯಸುತ್ತೇನೆ ಎಂದರು. ರೋಹನ್ ಮರೀನಾ ಅನಾವರಣ
ಈ ಸಂದರ್ಭದಲ್ಲಿ ರೋಹನ್ ಕಾರ್ಪೊರೇಶನ್ ಯೋಜಿಸಿರುವ ಐಷಾರಾಮಿ ಸಮುದ್ರತೀರ ವಸತಿ ಯೋಜನೆ ‘ಮರೀನಾ ಒನ್’ ಅನ್ನು ಶಾರುಖ್ ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ರೋಹನ್ ಕಾರ್ಪೊರೇಷನ್ ಪ್ರವರ್ತಕ ಡಾ| ರೋಹನ್ ಮೊಂತೇರೊ ಅವರು, ಶಾರುಖ್ ಖಾನ್ ಅವರ ಜೀವನ ಪಯಣವು ಲಕ್ಷಾಂತರ ಜನರಿಗೆ ಪ್ರೇರಣೆಯ ಮೂಲವಾಗಿದೆ, ಶಾರುಖ್ ಖಾನ್ ಅವರನ್ನು ಮಂಗಳೂರಿಗೆ ಕರೆ ತರುವ ಕನಸು ಇಂದು ನಿಜವಾಗಿದೆ ಎಂದರು.
ರೋಹನ್ ಕಾರ್ಪೊರೇಷನ್ ನಿರ್ದೇಶಕ ಡಿಯೋನ್ ಮೊಂತೇರೊ ಮಾತನಾಡಿ, ಮಂಗಳೂರಿನ ಜನತೆಗೆ ವಿಶ್ವಮಟ್ಟದ ಅನುಭವ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ನಗರದ ಜನರಿಂದ ದೊರೆತ ಅಭೂತಪೂರ್ವ ಸ್ಪಂದನೆ ಕಾರ್ಯಕ್ರಮವನ್ನು ಸಂಸ್ಥೆಯ ಪಯಣದ ಅತ್ಯಂತ ಸ್ಮರಣೀಯ ಘಟ್ಟವನ್ನಾಗಿ ರೂಪಿಸಿದೆ ಎಂದರು. ರೋಹನ್ ಮೊಂತೇರೊ ಅವರ ಪತ್ನಿ ಲವೀಟಾ, ಮಗಳು ರಿಯಾ ಮೊಂತೇರೊ ಉಪಸ್ಥಿತರಿದ್ದರು. ಸಾಹಿಲ್ ಜಹೀರ್ ಹಾಗೂ ಡೋನಾ ಸೆಬಾಸ್ಟಿಯನ್ ನಿರೂಪಿಸಿದರು.

ಕುಡ್ಲದಲ್ಲಿ ಶಿಕ್ಷಕನಾಗಿರುತ್ತಿದ್ದೆ!
ಕಾರ್ಯಕ್ರಮದ ಮಧ್ಯೆ ವಿಶೇಷ ಸಂವಾದದಲ್ಲೂ ಶಾರುಖ್ ಪಾಲ್ಗೊಂಡರು. ಒಂದು ವೇಳೆ ನೀವು ಬಾಲಿವುಡ್ ಗೆ ಹೋಗದಿರುತ್ತಿದ್ದರೆ ಏನಾಗಿರುತ್ತಿದ್ದಿರಿ ಎಂಬ ಪ್ರಶ್ನೆಗೆ, ನಾನು ಬಹುಶಃ ಇಲ್ಲಿನ ಸಂತ ಅಲೋಶಿಯಸ್ ಅಥವಾ ಮೌಂಟ್ ಕಾರ್ಮೆಲ್ ಅಥವಾ ಶಾರದಾ ಕಾಲೇಜಿನಲ್ಲಿ ಶಿಕ್ಷಕನಾಗಿರಲು ಬಯಸುತ್ತಿದ್ದೆ ಎಂದರು. ಮ೦ಗಳೂರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾರುಖ್, ನಗರದ ಆತಿಥ್ಯ, ಸಂಸ್ಕೃತಿ ಹಾಗೂ ವೇಗವಾಗಿ ಬೆಳೆಯುತ್ತಿರುವ ಅಭಿವೃದ್ಧಿಯನ್ನು ಶ್ಲಾಘಿಸಿದರು. ಯುವಜನತೆ ದೊಡ್ಡ ಕನಸು ಕಾಣಬೇಕು, ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು ಹಾಗೂ ಗುರಿ ಸಾಧನೆಗಾಗಿ ನಿರಂತರವಾಗಿ ಶ್ರಮಿಸಬೇಕು ಎಂದೂ ಹೇಳಿದರು.

ಕಾದರೂ ಖುಷಿ ಪಟ್ಟ ಅಭಿಮಾನಿಗಳು
ಸಂಜೆ 6ಕ್ಕೆ ಶಾರುಖ್ ಬರುವುದು ನಿಗದಿಯಾಗಿದ್ದರೂ ಅಪರಾಹ್ನ 3 ಗಂಟೆಗೇ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸಭಾಂಗಣಕ್ಕೆ ಆಗಮಿಸಿದರು. ಕಾರ್ಯಕ್ರಮಕ್ಕೆ ಶಾರುಖ್ ಆಗಮಿಸುವಾಗ ರಾತ್ರಿ 8 ಗಂಟೆಯಾಗಿದ್ದರೂ ಐದು ಗಂಟೆ ಉತ್ಸಾಹದಿಂದಲೇ ಅಭಿಮಾನಿಗಳು ಕಾದಿದ್ದರು. ಪೊಲೀಸರು, ಖಾಸಗಿ ಭದ್ರತಾ ಸಿಬಂದಿ ಸಹಿತ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಇದಕ್ಕೆ ಮೊದಲು ಸಂಜೆ ಐದರ ಸುಮಾರಿಗೆ ಮುಂಬಯಿಯಿಂದ ಖಾಸಗಿ ವಿಮಾನದಲ್ಲಿ ಆಗಮಿಸಿದ ಶಾರುಖ್ ಖಾನ್ ಅವರನ್ನು ಆಗಲೇ ವಿಮಾನನಿಲ್ದಾಣದಲ್ಲಿ ಸೇರಿದ್ದ ದೊಡ್ಡಸಂಖ್ಯೆಯ ಅಭಿಮಾನಿಗಳು ಹರ್ಷೋದ್ಗಾರದೊಂದಿಗೆ ಸ್ವಾಗತಿಸಿದರು, ಖುಷ್ ಆದ ಕಿಂಗ್ ಖಾನ್ ಅಭಿಮಾನಿಗಳ ಕಡೆಗೆ ಕೈಬೀಸಿ ಫೈಯಿಂಗ್ ಕಿಸ್ ಹಾರಿಸಿದರು.
ಕುಡ್ಲದಲ್ಲಿ ಬಾದ್ ಶಾ ಜಾದೂ!
ನಮಸ್ಕಾರ ಕುಡ್ಡ… ಎಂಚ ಉಲ್ಲರ್ ಎನ್ನುತ್ತಾ ಮಾತು ಆರಂಭಿಸಿದ ಶಾರುಖ್ ಪ್ರೀತಿ ಉಪ್ಪಡ್ ಎನ್ನುತ್ತಾ ವಿದಾಯ ಕೋರಿದರು.
ನನ್ನ ಅಜ್ಜ ಮಂಗಳೂರು ಬಂದರಿನಲ್ಲಿ ಎಂಜಿನಿಯರ್ ಆಗಿದ್ದವರು. ಆ ಬಗ್ಗೆ ನನಗೆ ಹೆಚ್ಚು ನೆನಪುಗಳಿಲ್ಲ. ಆದರೆ ಇಲ್ಲಿನ ಕೆಲವು ಫೊಟೋಗಳು ನನ್ನೊಂದಿವೆ ಎನ್ನುತ್ತಾ ಹಳೆಯ ಫೋಟೋಗಳನ್ನು ವೇದಿಕೆಯಲ್ಲಿ ಶಾರುಖ್ ಪ್ರದರ್ಶಿಸಿದಾಗ ಜನ ಚಪ್ಪಾಳೆ ತಟ್ಟಿ ಖುಷಿಪಟ್ಟರು.


ನಿಮಗೆ ಸಂವಾದ ನಡೆಸುವಾಗ ಬೋರ್ ಎನ್ನಿಸಿದರೆ ತಿಳಿಸಿ, ನಿಮ್ಮ ಮನರಂಜಿಸುವೆ ಎಂದ ಶಾರುಖ್ ಚಮ್ಮಕ್ ಚಲ್ಲೋ… ತುಜೆ ದೇಖಾ ತೋ ಯೇ ಜಾನಾ ಸನಮ್ ಹಾಡಿಗೆ ಕೆಲವು ಹೆಜ್ಜೆ ಹಾಕಿದ್ದನ್ನು ಸಹಸ್ರಾರು ಮಂದಿ ಅಭಿಮಾನಿಗಳು ಕಣ್ಣುಂಬಿಕೊಂಡಿದ್ದಲ್ಲದೆ ಸ್ಮಾರ್ಟ್ ಫೋನ್ ಮೆಮೊರಿಯಲ್ಲೂ ಸೇರಿಸಿಕೊಂಡರು.
ಹುಚ್ಚೆಬ್ಬಿಸಿದ ಸಲ್ಮಾನ್ ಅಲಿ
ಇಂಡಿಯನ್ ಐಡಲ್ ಖ್ಯಾತಿಯ ಗಾಯಕ ಸಲ್ಮಾನ್ ಅಲಿ ಅವರ ಗಾಯನ ಕಾರ್ಯಕ್ರಮದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು. ಮುಖ್ಯವಾಗಿ ಶಾರುಖ್ ಅವರ ಸಿನೆಮಾಗಳ ಛಯ್ಯ ಛಯ್ಯ, ಕೋಯಿ ಮಿಲ್ ಗಯಾ, ತುಮ್ಮೆ ಮಿಲ್ ಕೆ ದಿಲ್ ಕಾ ಯೇ ಜೋ ಹಾಲ್ ಕ್ಯಾ ಕಹೇ ಮೊದಲಾದ ಹಾಡುಗಳಿಗೆ ಸೇರಿದ್ದ ಜನ ಹುಚ್ಚೆದ್ದು ನರ್ತಿಸಿದರು.