ಉಡುಪಿ : ರಾಷ್ಟ್ರೀಯ ಹೆದ್ದಾರಿ 169ಎ ರ ತೀರ್ಥಹಳ್ಳಿ – ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ಮಳೆಯಿಂದಾಗಿ ಮತ್ತು ಭಾರಿ ವಾಹನಗಳ ಸಂಚಾರದಿಂದ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂಕುಸಿತ ಆಗುವ ಸಂಭವವಿರುವ ಹಿನ್ನೆಲೆ, ಸಾರ್ವಜನಿಕ ಹಿತದೃಷ್ಠಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ಣಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ಕಲಂ 221 (ಎ)(2) & (5) ರನ್ವಯ ರಾಷ್ಟ್ರೀಯ ಹೆದ್ದಾರಿ 169 ಎ ಆಗುಂಬೆ ಘಾಟಿಯ ಮೂಲಕ ಸೆಪ್ಟಂಬರ್ 30 ರವರೆಗೆ ಲಘು ವಾಹನ ಸಂಚಾರಕ್ಕೆ ಮಾತ್ರ ಅನುವು ಮಾಡಿ, ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶಿಸಿರುತ್ತಾರೆ.
ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ಸಂಚರಿಸುವ ಭಾರಿ ವಾಹನಗಳು ತೀರ್ಥಹಳ್ಳಿ-ನಗರ-ಕುಂದಾಪುರ ಹಾಗೂ ಉಡುಪಿ ಮಾರ್ಗವಾಗಿ ಮತ್ತು ಚಿಕ್ಕಮಗಳೂರಿನಿಂದ ಉಡುಪಿ ಕಡೆಗೆ ಬರುವ ಭಾರಿ ವಾಹನಗಳು ಬಾಳೆಹೊನ್ನೂರು-ಮಾಗುಂಡಿ-ಕಳಸ-ಕುದುರೆಮುಖ-ಎಸ್.ಕೆ ಬಾರ್ಡರ್ ಮಾರ್ಗವಾಗಿ ಸಂಚರಿಸಬೇಕು. ನರಸಿಂಹರಾಜಪುರದಿಂದ ಉಡುಪಿ ಕಡೆಗೆ ಬರುವ ವಾಹನಗಳು ಕೊಪ್ಪ-ಜಯಪುರ-ಬಾಳೆಹೊಳೆ-ಕಳಸ-ಕುದುರೆಮುಖ-ಎಸ್.ಕೆ ಬಾರ್ಡರ್ ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

















