ಉಡುಪಿ: ಗ್ಯಾರಂಟಿ ಯೋಜನೆಯ ಸೌಲಭ್ಯಗಳು ಅರ್ಹ ಫಲನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಇನ್ನೂ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದರು.
ಅವರು ಇಂದು ನಗರದ ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಉಡುಪಿ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನಗಳು ಜನರ ಜೀವನ ಮಟ್ಟವನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಅರ್ಹ ಫಲಾನುಭವಿಗಳು ಇದರ ಲಾಭ ಪಡೆಯುವಂತೆ ಆಗಬೇಕು. ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಗ್ಯಾರಂಟಿ ಯೋಜನಾ ಸಮಿತಿಯ ಪದಾಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ರಾಜ್ಯದ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಗುರಿಯಾಗಿರಿಸಿಕೊಂಡು ಸೈಬರ್ ವಂಚಕರು ಯೋಜನೆಯ ಹಣ ಮಂಜೂರು ಮಾಡುವುದಾಗಿ ಹೇಳಿ ಬ್ಯಾಂಕ್ ಖಾತೆ ಮತ್ತು ಓ.ಟಿ.ಪಿ ಪಡೆದು ಹಣ ಕಬಳಿಸುತ್ತಿರುವ ಪ್ರಕರಣಗಳು ಕೇಳಿ ಬರುತ್ತಿವೆ. ಈ ಬಗ್ಗೆ ಯಾವುದೇ ಅನುಮಾನಾಸ್ಪದ ಕರೆ ಬಂದಾಗ ರಾಷ್ಟ್ರೀಯ ಸೈಬರ್ ಕ್ಲೈಮ್ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ, ದೂರು ನೀಡಬೇಕು. ವಂಚನೆಗೊಳಗಾದ ಒಂದು ಗಂಟೆಯ ಒಳಗೆ ಸಹಾಯವಾಣಿಗೆ ದೂರು ನೀಡಿದಾಗ ಶೇ. 90 ರಷ್ಟು ಹಣ ಮರುಪಾವತಿ ಆಗುವ ಸಾಧ್ಯತೆಗಳಿರುವುದಾಗಿ ತಿಳಿಸಿದ ಅವರು, ಈ ಬಗ್ಗೆ ಫಲಾನುಭವಿಗಳು ಜಾಗರೂಕರಾಗಿ ಇರುವಂತೆ ಅರಿವು ಮೂಡಿಸಬೇಕು ಎಂದರು.
ಉಡುಪಿ ತಾಲೂಕಿಗೆ ಸಂಬಂಧಿಸಿದಂತೆ ಗೃಹ ಲಕ್ಷ್ಮಿ ಯೋಜನೆಯಡಿ ಮರಣ ಹೊಂದಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಮೊತ್ತದ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರವು ನಿರ್ದೇಶನ ನೀಡಿದ್ದು, 2318 ಮರಣ ಹೊಂದಿದವರ ಪಟ್ಟಿ ನೀಡಿದ್ದು, ಇವರುಗಳು ಯಾವ ಊರಿನವರು ಎಂಬ ಹೆಸರು ನೀಡಿರುವುದಿಲ್ಲ.
ಸಂಬಂಧಪಟ್ಟ ಅಂಗನವಾಡಿ ಶಿಕ್ಷಕರ ಮೂಲಕ ಮರಣ ಹೊಂದಿದವರ ವಿವರ ಸಂಗ್ರಹಿಸುವ ಕೆಲಸವನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸಾರ್ವಜನಿಕರು ಮತ್ತು ಫಲಾನುಭವಿ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಗೆ / ವದಂತಿಗಳಿಗೆ ಕಿವಿಗೊಡಬಾರದು. ಪ್ರಸ್ತುತ ಯಾವುದೇ ಮಾರ್ಗಸೂಚಿಗಳು ಬಂದಿರುವುದಿಲ್ಲ. ಗ್ಯಾರಂಟಿ ಯೋಜನೆಗಳು ಈ ಹಿಂದಿನಂತೆಯೇ ಮುಂದುವರೆಯಲಿದ್ದು, ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದರು. ಉಡುಪಿ ತಾಲೂಕಿನ ಕೆಲವು ಹೊಸ ರೂಟ್ಗಳಿಗೆ ಹೊಸ ಬಸ್ಗಳ ಬೇಡಿಕೆಯನ್ನು ಜಿಲ್ಲಾ ಕಮಿಟಿಗೆ ಕಳುಹಿಸಿದ್ದು, ಆದಷ್ಟು ತ್ವರಿತಗತಿಯಲ್ಲಿ ಬಸ್ಗಳು ಸಂಚಾರಗೊಳ್ಳುವ ಭರವಸೆ ಇರುವುದಾಗಿ ತಿಳಿಸಿದ ಅವರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ಗಾಗಿ ಸೇವಾಸಿಂಧು ಪೋರ್ಟಲ್ ನಲ್ಲಿ ಅಪ್ಲಿಕೇಷನ್ ಪಾರ್ ಸ್ಟೂಡೆಂಟ್ ಪಾಸ್ ಫಾರ್ಮ್ ಡೌನ್ಲೋಡ್ ಮಾಡಿಕೊಂಡು, ಇದರಲ್ಲಿ ವಿದ್ಯಾರ್ಥಿ ಹೆಸರು, ಭಾವಚಿತ್ರ, ಪ್ರಯಾಣ ಮಾಡುವ ರೂಟ್ನ ವಿವರ, ಶಾಲಾ/ ಕಾಲೇಜಿನಿಂದ ನೀಡಲಾದ ಫೀಸ್ ಪೇಮೆಂಟ್ ಸ್ಲಿಪ್ / ಸ್ಟಡಿ ಸರ್ಟಿಫಿಕೇಟ್ / ಆಧಾರ್ ಗಳೊಂದಿಗೆ ಅದೇ ಸೇವಾಸಿಂಧು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿದಾಗ ಅಕ್ನಾಲೆಡ್ಜ್ಮೆಂಟ್ ದೊರೆಯಲಿದೆ. ಕಡಿಯಾಳಿಯಲ್ಲಿರುವ ಏಜೆನ್ಸಿಯಲ್ಲಿ ಈ ಬಸ್ಪಾಸ್ ಅನ್ನು ಮಾಡಿಕೊಡಲಾಗುವುದು ಎಂದರು.
ತುರ್ತು ವೈದ್ಯಕೀಯ ಚಿಕಿತ್ಸೆ ಅವಶ್ಯವಿರುವ ಸಾರ್ವಜನಿಕರು ಹೊಸ ಪಡಿತರ ಚೀಟಿ ಪಡೆಯಲು, ಅವರ ಆನಾರೋಗ್ಯ ಸಂಬಂಧಿತ ದಾಖಲಾತಿ, ಸ್ಕ್ಯಾನಿಂಗ್ ರಿಪೋರ್ಟ್, ಆದಾಯ ಪ್ರಮಾಣ ಪತ್ರದೊಂದಿಗೆ ಕರ್ನಾಟಕ ಒನ್ ಸೆಂಟರ್ ನಲ್ಲಿ ಅಪ್ಲಿಕೇಷನ್ ಹಾಕಿದಾಗ ಅದರಲ್ಲಿ 103 ಕಾಯಿಲೆಗಳ ಪಟ್ಟಿಯನ್ನು ಆಹಾರ ಇಲಾಖೆಯ ತಂತ್ರಾಂಶದಲ್ಲಿ ಅಳವಡಿಸಲಾಗಿರುತ್ತದೆ. ಇದಕ್ಕೆ ಅನುಗುಣವಾಗಿ ಅರ್ಜಿ ಸಲ್ಲಿಸಿದಲ್ಲಿ ನಿಯಮಾನುಸಾರ ಪರಿಶೀಲಿಸಿ, ಪಡಿತರ ಚೀಟಿ ನೀಡಲಾಗುವುದು ಎಂದ ಅವರು, ಆರೋಗ್ಯ ಸಮಸ್ಯೆ ಹೊಂದಿರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ ಅನರ್ಹರು ಸೌಲಭ್ಯ ಪಡೆಯುತ್ತಿದ್ದರೆ ಅದನ್ನು ತಡೆಗಟ್ಟಿ ಅರ್ಹರಿಗೆ ಯೋಜನೆಯ ಪ್ರಯೋಜನ ಪಡೆಯುವಂತೆ ಮಾಡಬೇಕು. ಉಡುಪಿ ತಾಲೂಕಿನಲ್ಲಿ ಕೆಲವು ವಿದ್ಯಾರ್ಥಿಗಳು ಕೆಲಸಕ್ಕೆ ಸೇರಿದರೂ ಸಹ ಯುವನಿಧಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ಈ ಬಗ್ಗೆ ಅನರ್ಹ ಪಟ್ಟಿ ತಯಾರಿಸಿ ನೀಡುವಂತೆ ತಿಳಿಸಿದ ಅವರು, ಯುವನಿಧಿ ಯೋಜನೆಯ ಸೌಲಭ್ಯ ಅರ್ಹ ವಿದ್ಯಾರ್ಥಿಗಳಿಗೆ ತಲುಪುವಂತಾಗಲು ಮುಂದಿನ ದಿನಗಲಲಿ ಉಡುಪಿ ತಾಲೂಕಿನಲ್ಲಿ ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಯುವನಿಧಿ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತ್ನ ಸಹಾಯಕ ನಿರ್ದೇಶಕಿ ಫರ್ಜಾನಾ ಎಮ್, ಸಮಿತಿಯ ಸದಸ್ಯರುಗಳು, ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

















