ಉಡುಪಿ: ಗುರುಶಿಷ್ಯರ ನಡುವಿನ ಶ್ರೇಷ್ಠ ಸಂಬಂಧವೇ ವಿದ್ಯಾರ್ಥಿ ಜೀವನದ ಯಶಸ್ಸಿಗೆ ಸೋಪಾನ ಎಂದು ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ ಹೇಳಿದರು.
ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಶುಕ್ರವಾರ ನಡೆದ 21ನೇ ಶಿಷ್ಯೋಪನಯನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ ಯಶೋವರ್ಮ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಡಾ. ಜಿ. ಶ್ರೀನಿವಾಸ ಆಚಾರ್ಯ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಕೆ.ವಿ. ಮಮತ, ಸ್ನಾತಕೋತ್ತರ ವಿಭಾಗದ ಸಹಾಯಕ ಮುಖ್ಯಸ್ಥ ಡಾ. ಎಸ್. ನಾಗರಾಜ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಚೇತ ಕುಮಾರಿ ವಿದ್ಯಾರ್ಥಿಗಳಿಗೆ ದೀಕ್ಷಾಬೋಧನೆ ಮಾಡಿದರು. ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ನಿರಂಜನ್ ರಾವ್ ಸ್ವಾಗತಿಸಿದರು. ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಕೆ. ವೀರಕುಮಾರ ವಂದಿಸಿದರು. ಸ್ವಸ್ಥವೃತ್ತ ವಿಭಾಗದ ಸಹಪ್ರಾಧ್ಯಾಪಕ ಡಾ. ಯೋಗೀಶ ಆಚಾರ್ಯ ಹಾಗೂ ರೋಗನಿದಾನ ವಿಭಾಗದ ಉಪನ್ಯಾಸಕ ಡಾ. ಅರುಣ್ ಕುಮಾರ ಕಾರ್ಯಕ್ರಮ ನಿರೂಪಿಸಿದರು.
ಶಿಷ್ಯೋಪನಯನದ ಪ್ರಯುಕ್ತ ಬೆಳಿಗ್ಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಉಪಸ್ಥಿತಿಯಲ್ಲಿ ಧನ್ವಂತರಿ ಹೋಮ ನಡೆಯಿತು.