ಮೆಲಿಂಡಾ ಜೊತೆಗಿನ ವಿವಾಹದ ವೇಳೆ ಮೂರು ಅಕ್ರಮ ಸಂಬಂಧವಿತ್ತು! ಕೊನೆಗೂ ಸತ್ಯ ಬಹಿರಂಗಪಡಿಸಿದ ಬಿಲ್ ಗೇಟ್ಸ್

ವಾಷಿಂಗ್ಟನ್: ಬಿಲ್ ಗೇಟ್ಸ್ Bill Gates ಅವರು ಅಮೆರಿಕ ಸಂಸತ್ತಿನ ಹೌಸ್ ಓವರ್‌ಸೈಟ್ ಸಮಿತಿಯ ಮುಚ್ಚಿದ ಬಾಗಿಲಿನ (closed-door) ವಿಚಾರಣೆಯಲ್ಲಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಮಹತ್ವದ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಮಾಜಿ ಪತ್ನಿ ಮೆಲಿಂಡಾ Melinda French Gates ಅವರೊಂದಿಗೆ ವೈವಾಹಿಕ ಜೀವನದಲ್ಲಿದ್ದ ವೇಳೆ ಮೂರು ವಿವಾಹೇತರ ಸಂಬಂಧಗಳನ್ನು ಹೊಂದಿದ್ದುದಾಗಿ ಅವರು ಒಪ್ಪಿಕೊಂಡಿದ್ದಾರೆ.

ಗೇಟ್ಸ್ ಅವರ ಹೇಳಿಕೆಯ ಪ್ರಕಾರ, ಬ್ರಿಡ್ಜ್ ಆಟಗಾರ್ತಿ ಮಿಲಾ ಆಂಟೋನೊವಾ, ಪರಮಾಣು ವಿಜ್ಞಾನಿ ಕರಿಮಾ ನಿಗ್ಮಾತುಲಿನಾ ಹಾಗೂ ವೈದ್ಯಕೀಯ ಉದ್ಯಮಿ ಆಲಿಸ್ ಜಾಕೋಬ್ಸ್ ನೆಸೆಲ್ರೋಡ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಈ ಸಂಬಂಧಗಳ ಬಗ್ಗೆ ಮಾಹಿತಿ ಹೊಂದಿದ್ದ ಲೈಂಗಿಕ ಅಪರಾಧಿ ಜೆಫ್ರೇ ಎಸ್ಟೀನ್ Jeffrey Epstein ಅದನ್ನು ಬಳಸಿಕೊಂಡು ತಮ್ಮ ಮೇಲೆ ಒತ್ತಡ ಹೇರಲು ಮತ್ತು ಮತ್ತೆ ಸಂಪರ್ಕ ಬೆಳೆಸಲು ಪ್ರಯತ್ನಿಸಿದ್ದ ಎಂದು ಗೇಟ್ಸ್ ಹೇಳಿದ್ದಾರೆ.

ಆದರೆ, ಎಪ್‌ಸ್ಟೀನ್ ತನ್ನನ್ನು ನೇರವಾಗಿ ಬ್ಲ್ಯಾಕ್‌ಮೇಲ್ ಮಾಡಿಲ್ಲ ಎಂದು ಗೇಟ್ಸ್ ಸ್ಪಷ್ಟಪಡಿಸಿದ್ದು, ಇಮೇಲ್‌ಗಳು ಹಾಗೂ ಸಂದೇಶಗಳ ಮೂಲಕ ಪರೋಕ್ಷ ಬೆದರಿಕೆಗಳ ವಾತಾವರಣ ನಿರ್ಮಿಸಲು ಯತ್ನಿಸಿದ್ದನೆಂದು ತಿಳಿಸಿದ್ದಾರೆ. “ನನ್ನ ವೈಯಕ್ತಿಕ ಸಂಬಂಧಗಳ ಮಾಹಿತಿಯನ್ನು ಬಳಸಿಕೊಂಡು ಎಪ್‌ಸ್ಟೀನ್ ನನ್ನ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದ” ಎಂದು ಗೇಟ್ಸ್ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಇದೇ ವೇಳೆ, ಎಪ್‌ಸ್ಟೀನ್‌ನ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ತಾನು ಭಾಗಿಯಾಗಿಲ್ಲ ಎಂದು ಗೇಟ್ಸ್ ಪುನರುಚ್ಚರಿಸಿದ್ದಾರೆ. ಎಪ್‌ಸ್ಟೀನ್ ಜೊತೆಗಿನ ಸಂಪರ್ಕವು ದಾನಧರ್ಮ ಹಾಗೂ ಪರೋಪಕಾರಿ ಕಾರ್ಯಗಳಿಗೆ ಸಂಬಂಧಿಸಿದ ಉದ್ದೇಶಗಳಿಂದ ಮಾತ್ರವಾಗಿತ್ತು ಎಂದು ಹೇಳಿದ್ದು, “ಅವನನ್ನು ಭೇಟಿಯಾಗಿದ್ದೇ ನನ್ನ ದೊಡ್ಡ ತಪ್ಪು” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಗೇಟ್ಸ್ ಅವರು ಎಪ್‌ಸ್ಟೀನ್‌ನ ಖಾಸಗಿ ದ್ವೀಪ, ರಾಂಚ್ ಅಥವಾ ಫ್ಲೋರಿಡಾದ ನಿವಾಸಗಳಿಗೆ ತಾವು ಎಂದಿಗೂ ಭೇಟಿ ನೀಡಿಲ್ಲ ಹಾಗೂ ಅವನ ಅಪರಾಧ ಚಟುವಟಿಕೆಗಳ ಬಗ್ಗೆ ಆಗ ತಿಳಿದಿರಲಿಲ್ಲ ಎಂದು ಸಮಿತಿಗೆ ತಿಳಿಸಿದ್ದಾರೆ.