ನವದೆಹಲಿ: ಕಳೆದ 12 ತಿಂಗಳಲ್ಲಿ ಅಮೆರಿಕದ ತಂತ್ರಜ್ಞಾನ ದಿಗ್ಗಜ ಒರಾಕಲ್ ಕಾರ್ಪ್ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 21 ಸಾವಿರದಷ್ಟು ಕಡಿಮೆ ಮಾಡಿರುವುದಾಗಿ ಬಹಿರಂಗಪಡಿಸಿದೆ. ಈ ಹಿಂದೆ ಅಂದಾಜಿಸಲಾಗಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಡೆದಿರುವ ಈ ಉದ್ಯೋಗ ಕಡಿತದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯಿಂದ ಉಂಟಾದ ಪರಿಣಾಮವೂ ಸೇರಿದೆ.
ಅಮೆರಿಕದ ಹಣಕಾಸು ನಿಯಂತ್ರಕ ಸಂಸ್ಥೆಗೆ ಸಲ್ಲಿಸಿರುವ ವಾರ್ಷಿಕ ವರದಿಯಲ್ಲಿ, “ನಮ್ಮ ಕಾರ್ಯಾಚರಣೆಗಳಲ್ಲಿ AI ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ ಪರಿಣಾಮ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಪ್ರಕ್ರಿಯೆ ಮುಂದುವರಿಯುವ ಸಾಧ್ಯತೆಯೂ ಇದೆ” ಎಂದು ಒರಾಕಲ್ ತಿಳಿಸಿದೆ.
2026ರ ಮೇ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದ ವೇಳೆಗೆ ಕಂಪನಿಯ ಜಾಗತಿಕ ಸಿಬ್ಬಂದಿ ಸಂಖ್ಯೆ 1.41 ಲಕ್ಷಕ್ಕೆ ಇಳಿದಿದ್ದು, ಹಿಂದಿನ ವರ್ಷ ಅದು 1.62 ಲಕ್ಷವಾಗಿತ್ತು. ಈ ಪುನರ್‌ರಚನೆ ಮತ್ತು ಉದ್ಯೋಗ ಕಡಿತ ಕ್ರಮಗಳಿಂದ ಕಂಪನಿಗೆ ಸುಮಾರು 1.8 ಬಿಲಿಯನ್ ಡಾಲರ್ ವೆಚ್ಚ ಉಂಟಾಗಿದೆ.
ಒರಾಕಲ್, ಓಪನ್‌ಎಐ ಸೇರಿದಂತೆ ವಿವಿಧ ಗ್ರಾಹಕರಿಗಾಗಿ AI ಡೇಟಾ ಕೇಂದ್ರಗಳನ್ನು ನಿರ್ಮಿಸುವ ಭಾರೀ ಹೂಡಿಕೆಯಿಂದ ಆರ್ಥಿಕ ಒತ್ತಡಕ್ಕೆ ಒಳಗಾಗಿದೆ. ವೆಚ್ಚ ಕಡಿತದ ಭಾಗವಾಗಿ ಈ ವರ್ಷದ ಆರಂಭದಲ್ಲೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಆರಂಭವಾಗಿತ್ತು ಎಂದು ಬ್ಲೂಮ್‌ಬರ್ಗ್ ವರದಿ ಮಾಡಿತ್ತು. ಆದರೆ, ಉದ್ಯೋಗ ಕಡಿತದ ನಿಖರ ಸಂಖ್ಯೆಯನ್ನು ಕಂಪನಿ ಇದುವರೆಗೆ ಅಧಿಕೃತವಾಗಿ ಬಹಿರಂಗಪಡಿಸಿರಲಿಲ್ಲ.
ಮೇ ಅಂತ್ಯದ ವೇಳೆಗೆ ಒರಾಕಲ್‌ನಲ್ಲಿ ಸುಮಾರು 49 ಸಾವಿರ ಮಂದಿ ಅಮೆರಿಕದಲ್ಲಿ ಹಾಗೂ 92 ಸಾವಿರ ಮಂದಿ ಇತರ ದೇಶಗಳಲ್ಲಿ ಉದ್ಯೋಗದಲ್ಲಿದ್ದರು.
2022ರಲ್ಲಿ 28 ಬಿಲಿಯನ್ ಡಾಲರ್ ಮೌಲ್ಯದ ಸೆರ್ನರ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ನಂತರ ಸಾವಿರಾರು ಉದ್ಯೋಗಿಗಳು ಒರಾಕಲ್‌ಗೆ ಸೇರ್ಪಡೆಯಾಗಿದ್ದರು. ಆದರೆ ಈಗ ಕಂಪನಿಯ ಒಟ್ಟು ಸಿಬ್ಬಂದಿ ಸಂಖ್ಯೆ, ಸೆರ್ನರ್ ಸ್ವಾಧೀನಕ್ಕೂ ಮುನ್ನ ಇದ್ದ ಮಟ್ಟಕ್ಕಿಂತಲೂ ಸ್ವಲ್ಪ ಕಡಿಮೆಯಾಗಿದೆ.
Top of Form
Bottom of Form

















