ಹೈದರಾಬಾದ್: ದೇಶವನ್ನೇ ತಲ್ಲಣಗೊಳಿಸಿದ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರು ಆರೋಪಿಗಳಾದ ಮೊಹಮ್ಮದ್ ಅರೀದ್, ಜೊಲ್ಲು ಶಿವ, ಜೊಲ್ಲು ನವೀನ್ ಹಾಗೂ ಚಿಂತಾಕುಂಟ ಚೆನ್ನಕೇಶವುಲು ಹತರಾಗಿದ್ದಾರೆ.
ಅತ್ಯಾಚಾರ ನಡೆದ ಸ್ಥಳ ಮಹಜರು ನಡೆಸಲು ತೆರಳಿದ ವೇಳೆ ಆರೋಪಿಗಳು ತಪ್ಪಿಸಲು ಯತ್ನಿಸಿದ್ದರು. ಅಲ್ಲದೇ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಆತ್ಮ ರಕ್ಷಣೆಗಾಗಿ ಎನ್ ಕೌಂಟರ್ ನಡೆಸಿದ್ದಾರೆ. ಬೆಳಿಗ್ಗೆ 3.30 ರ ವೇಳೆಗೆ ಘಟನೆ ನಡೆದಿದೆ. ನಾಲ್ವರು ಸಾವನ್ನಪ್ಪಿದ್ದಾರೆ.
ಪಂಚರ್ ಆಗಿದ್ದ ಸ್ಕೂಟರ್ ಟೈರ್ ರಿಪೇರಿ ಮಾಡಿಕೊಡ್ತೀವಿ ಅಂತ ಬಂದ ಆ ಕಿರಾತಕರು ಪ್ರಿಯಾಂಕಾ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ, ಮೃತದೇಹವನ್ನು ಭೀಕರವಾಗಿ ಸುಟ್ಟುಹಾಕಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. ಇದೀಗ ವಿಶ್ವನಾಥ ಸಜ್ಜನರ್ ನೇತೃತ್ವದ ತಂಡ ಎನ್ ಕೌಂಟರ್ ನಡೆಸಿ ಕಿರಾತಕರನ್ನು ಯಮಲೋಕಕ್ಕೆ ಅಟ್ಟಿದ ಸುದ್ದಿ ಹೊರಬರುತ್ತಿದ್ದಂತೆಯೇ ದೇಶದ ಜನರು ನಿಟ್ಟುಸಿರುಬಿಟ್ಟಿದ್ದಾರೆ.