ವಿದೇಶದಿಂದಲೇ ಸಿಸಿಟಿವಿ ನಿಗಾ: ಪೊಲೀಸ್ ಪತಿಯ ‘ಕಳ್ಳಾಟ’ ಬಯಲು ಮಾಡಿತು ಪತ್ನಿಯ ಈ ಮಾಸ್ಟರ್ ಪ್ಲ್ಯಾನ್!

ಚೆನ್ನೈ: ಕಳ್ಳರನ್ನು ಹಿಡಿಯಲು ಪೊಲೀಸರು ಬಲೆ ಬೀಸುವುದು ಸಾಮಾನ್ಯ. ಆದರೆ ತಮಿಳುನಾಡಿನಲ್ಲಿ ಪೊಲೀಸ್ ಪತಿಯೇ ನಡೆಸುತ್ತಿದ್ದ ಗುಪ್ತ ಸಂಬಂಧವನ್ನು ಪತ್ತೆಹಚ್ಚಲು ಪತ್ನಿ ರೂಪಿಸಿದ ಮಾಸ್ಟರ್ ಪ್ಲ್ಯಾನ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಚೆನ್ನೈನ ಮಾಂಬಲಂ ಸಂಚಾರ ವಿಭಾಗದಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಅರುಲ್ ಪ್ರಸಾದ್ ಅವರು, ಕಡಲೂರು ಮೂಲದ ಅಭಿನಯ ಅವರನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲಿ ಅಭಿನಯ ಅವರಿಗೆ ವಿದೇಶದಲ್ಲಿ ಉದ್ಯೋಗ ದೊರೆತಿದ್ದು, ಅಲ್ಲಿಯೇ ನೆಲೆಸಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅರುಲ್ ಪ್ರಸಾದ್ ಚೆನ್ನೈನ ರಾಮಾಪುರಂನಲ್ಲಿ ಒಬ್ಬರೇ ವಾಸಿಸುತ್ತಿದ್ದರು.

ಇದೇ ವೇಳೆ, ಅರುಲ್ ಪ್ರಸಾದ್ ಅವರ ಮನೆಗೆ ಮಹಿಳೆಯೊಬ್ಬರು ಆಗಾಗ್ಗೆ ಬರುತ್ತಿರುವ ಬಗ್ಗೆ ನೆರೆಹೊರೆಯವರು ಅಭಿನಯ ಅವರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಅನುಮಾನಗೊಂಡ ಅಭಿನಯ, ಕೆಲ ತಿಂಗಳ ಹಿಂದೆ ಚೆನ್ನೈಗೆ ಬಂದಾಗ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ತಮ್ಮ ಮೊಬೈಲ್‌ಗೆ ಸಂಪರ್ಕಿಸಿಕೊಂಡು, ಈ ವಿಷಯವನ್ನು ಪತಿಗೆ ತಿಳಿಸದೇ ವಿದೇಶದಿಂದಲೇ ಮನೆಯ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಆರಂಭಿಸಿದ್ದರು.

ಸಿಸಿಟಿವಿ ದೃಶ್ಯಗಳಲ್ಲಿ ಅರುಲ್ ಪ್ರಸಾದ್ ಅವರು ಮಹಿಳೆಯೊಬ್ಬರನ್ನು ಮನೆಗೆ ಕರೆತರುತ್ತಿರುವುದು ಪದೇ ಪದೇ ಕಾಣಿಸಿಕೊಂಡಿದ್ದರಿಂದ, ಸತ್ಯ ತಿಳಿದುಕೊಳ್ಳಲು ಅಭಿನಯ ಮೂರು ದಿನಗಳ ಹಿಂದೆ ಯಾರಿಗೂ ತಿಳಿಯದಂತೆ ಚೆನ್ನೈಗೆ ಆಗಮಿಸಿ ಹೋಟೆಲ್‌ನಲ್ಲಿ ತಂಗಿದ್ದರು. ಅಲ್ಲಿಂದಲೇ ಮೊಬೈಲ್ ಮೂಲಕ ಸಿಸಿಟಿವಿ ದೃಶ್ಯಗಳನ್ನು ವೀಕ್ಷಿಸುತ್ತಿದ್ದ ಅವರು, ಜನನಿ ಎಂಬ ಮಹಿಳೆ ಮನೆಗೆ ಬಂದಿರುವುದನ್ನು ಗಮನಿಸಿ ತಕ್ಷಣ ಮನೆಗೆ ತೆರಳಿದ್ದಾರೆ.

ಅಲ್ಲಿ ಪತಿ ಹಾಗೂ ಮಹಿಳಾ ಸ್ನೇಹಿತೆಯನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿರುವುದಾಗಿ ವರದಿಯಾಗಿದೆ. ಘಟನೆಯ ಬಳಿಕ ಅವರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಕೋಪಗೊಂಡ ಅಭಿನಯ ಅವರು ಜನನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗಾಯಗೊಂಡ ಜನನಿ, ವಲಸರವಕ್ಕಂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿದೇಶದಲ್ಲಿದ್ದ ಪತ್ನಿಯೊಬ್ಬರು ಸಿಸಿಟಿವಿ ಮೂಲಕ ಪತಿಯ ಚಲನವಲನಗಳ ಮೇಲೆ ನಿಗಾ ಇಟ್ಟು, ಅಚ್ಚರಿಯ ದಾಳಿ ನಡೆಸಿ ರೆಡ್‌ಹ್ಯಾಂಡ್‌ ಆಗಿ ಹಿಡಿದ ಘಟನೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.