ಅನ್ನಭಾಗ್ಯ ಯೋಜನೆಯಿಂದ 13-14 ಲಕ್ಷ ಅನರ್ಹರನ್ನು ಕೈಬಿಡಲು ಸರ್ಕಾರ ನಿರ್ಧಾರ

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಭಾರದಿಂದ ಆರ್ಥಿಕ ಒತ್ತಡ ಎದುರಿಸುತ್ತಿರುವ ರಾಜ್ಯ ಸರ್ಕಾರ, ಪ್ರಮುಖ ಯೋಜನೆಗಳ ಪರಿಷ್ಕರಣೆಗೆ ಮುಂದಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಗೃಹಜ್ಯೋತಿ, ಗೃಹಲಕ್ಷ್ಮಿ ಜೊತೆಗೆ ಅನ್ನಭಾಗ್ಯ ಯೋಜನೆಯಲ್ಲೂ ಫಲಾನುಭವಿಗಳ ಮರುಪರಿಶೀಲನೆ ನಡೆಸುವ ಚರ್ಚೆ ನಡೆಯುತ್ತಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ K. H. Muniyappa ಈ ಕುರಿತು ಸುಳಿವು ನೀಡಿದ್ದು, ಸುಮಾರು 13-14 ಲಕ್ಷ ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಹೊರಗಿಡುವ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸರ್ಕಾರಿ ನೌಕರರ ಕುಟುಂಬಗಳಿಗೆ ಗ್ಯಾರಂಟಿ ಸೌಲಭ್ಯಗಳನ್ನು ಕಡಿತಗೊಳಿಸುವ ವಿಚಾರವೂ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ತಿಳಿದುಬಂದಿದೆ.

ಇದರ ನಡುವೆ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಎಚ್ ಎಂ ರೇವಣ್ಣ H. M. Revanna ತಮ್ಮ ಹಿಂದಿನ ಹೇಳಿಕೆಗೆ ವಿರುದ್ಧವಾಗಿ ಪ್ರತಿಕ್ರಿಯಿಸಿದ್ದು, ಯಾವುದೇ ಸರ್ಕಾರಿ ನೌಕರರನ್ನು ಗ್ಯಾರಂಟಿ ಯೋಜನೆಗಳಿಂದ ಹೊರಗಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೃತ ವ್ಯಕ್ತಿಗಳ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ಸೇರಿದಂತೆ ಅನರ್ಹ ಫಲಾನುಭವಿಗಳನ್ನು ಗುರುತಿಸುವುದೇ ಪರಿಷ್ಕರಣೆಯ ಉದ್ದೇಶ ಎಂದು ಹೇಳಿದ್ದಾರೆ.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಪ್ರತಿಕ್ರಿಯಿಸಿ, ಈ ವಿಷಯದಲ್ಲಿ ಸರ್ಕಾರವು ತಮ್ಮೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಅವರೇ ಯೋಜನೆಗಳನ್ನು ಕೊಟ್ಟರು, ಈಗ ಅವರೇ ಹಿಂಪಡೆಯಲು ಮುಂದಾಗಿದ್ದಾರೆ” ಎಂದು ಟೀಕಿಸಿದ್ದಾರೆ.

ಇನ್ನೊಂದೆಡೆ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ D. K. Shivakumar ನೇತೃತ್ವದಲ್ಲಿ ಗ್ಯಾರಂಟಿ ಪರಿಷ್ಕರಣಾ ಸಮಿತಿಗೆ ಪ್ರತಿ ವಾರ್ಡ್ ಹಾಗೂ ಗ್ರಾಮ ಪಂಚಾಯಿತಿಗೆ ಐವರು ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡುವ ಪ್ರಸ್ತಾಪಕ್ಕೂ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಇದನ್ನು “ಲೂಟಿ ಮಾಡಲು ನಡೆಸುತ್ತಿರುವ ವ್ಯವಸ್ಥೆ” ಎಂದು ಆರೋಪಿಸಿವೆ.

ಇದೇ ವೇಳೆ, ಸಾರಿಗೆ ನಿಗಮಗಳು ಬಿಎಂಟಿಸಿ ಬಸ್ ದರವನ್ನು ಶೇ.44ರಷ್ಟು ಹಾಗೂ ಕೆಎಸ್‌ಆರ್‌ಟಿಸಿ ಬಸ್ ದರವನ್ನು ಶೇ.33ರಷ್ಟು ಹೆಚ್ಚಿಸುವ ಪ್ರಸ್ತಾವವನ್ನೂ ಸರ್ಕಾರದ ಮುಂದಿಟ್ಟಿವೆ. ಈ ಬೆಳವಣಿಗೆಗಳು ರಾಜ್ಯದ ಜನರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀರುವ ಸಾಧ್ಯತೆ ಇದೆ.