ಉಡುಪಿ: ಬ್ರಹ್ಮಾವರ ತಾಲೂಕು ಸೀತಾನದಿ-ಬ್ರಹ್ಮಾವರ ರಸ್ತೆ (ಬ್ರಹ್ಮಾವರದಿಂದ ಹೆಬ್ರಿ ಕಡೆಗೆ 7 ಕಿ.ಮೀ.) ವರೆಗೆ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಸಲುವಾಗಿ ರಸ್ತೆಯ ಇಕ್ಕೆಲಗಳಲ್ಲಿ ಕಾಮಗಾರಿಗೆ ಅಂದಾಜು 1,092 ಮರಗಳನ್ನು ಕಡಿಯಲು ಜಿಲ್ಲಾಡಳಿತ ಉದ್ದೇಶಿಸಿದೆ.
ಸ್ಥಳದಲ್ಲಿರುವ ಮರಗಳು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ ಪ್ರಕರಣ 8(3) (ಗಿIII) ರಡಿ 50 ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದ್ದಲ್ಲಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ, ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಡಿ. 30 ರಂದು ಮಧ್ಯಾಹ್ನ 3 ಕ್ಕೆ ಉಡುಪಿಯ, ಉಡುಪಿ ವಲಯ ಅರಣ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಕರೆಯಲಾಗಿದೆ.
ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ ಖುದ್ದಾಗಿ ಸಭೆಯಲ್ಲಿ ಹಾಜರಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಅಥವಾ ಸದ್ರಿ ದಿನಾಂಕದ ಒಳಗೆ ವೃಕ್ಷ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ, ಕುಂದಾಪುರ ಇವರಿಗೆ ಲಿಖಿತ ರೂಪದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಅಥವಾ ಅಂಚೆ ವಿಳಾಸ- ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ, ಕುಂದಾಪುರ-576201 ಕ್ಕೆ ನಿಗದಿತ ಸಮಯ ಹಾಗೂ ದಿನಾಂಕದೊಳಗೆ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ.