ಕಾಲೇಜು ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಸಮಾರಂಭದ ವರದಿ:
ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ 2026-27 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಸಮಾರಂಭವು ದಿನಾಂಕ 16-06-2026 ರಂದು ಕಾಲೇಜಿನ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಉದ್ದೇಶವನ್ನು ಹೊಂದಿತ್ತು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭವಾಯಿತು. ನಂತರ ಮುಖ್ಯ ಅತಿಥಿಗಳು, ಸಂಚಾಲಕರು, ಪ್ರಾಂಶುಪಾಲರು ಮತ್ತು ಇತರ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ವಿದ್ಯಾರ್ಥಿ ಪರಿಷತ್ತನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಂಸಿಸಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಇವರು ಮಾತನಾಡಿ, ‘ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ’ ಎಂದು ವಿವರಿಸಿದರು.
ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಝೈನ್ ಶೇಖ್ ಜಾಕಿರ್, ಉಪಾಧ್ಯಕ್ಷೆ ಕು. ಸಿಂಚನ, ವಿವಿಧ ಕ್ಷೇತ್ರದ ಕಾರ್ಯದರ್ಶಿಗಳು ಮತ್ತು ಇತರ ಪದಾಧಿಕಾರಿಗಳಿಗೆ ಗಣ್ಯರು ಬ್ಯಾಡ್ಜ್ಗಳನ್ನು ವಿತರಿಸಿ ಗೌರವಿಸಿದರು. ನಂತರ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮೆಲ್ವಿನ್ ವಾಸ್ ಇವರು ನೂತನ ಸದಸ್ಯರಿಗೆ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರೂ ಆಗಿರುವ ಅತೀ. ವಂದನೀಯ ಗುರುಗಳಾದ ಐವನ್ ಮೈಕಲ್ ರೊಡ್ರಿಗಸ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, “ವಿದ್ಯಾರ್ಥಿ ಜೀವನವು ಕೇವಲ ಶಿಕ್ಷಣಕ್ಕೆ ಸೀಮಿತವಾಗಿರದೆ, ಶಿಸ್ತು ,ನಾಯಕತ್ವ, ಸಮಯಪ್ರಜ್ಞೆ ಮತ್ತು ವ್ಯಕ್ತಿತ್ವ ವಿಕಸನವನ್ನು ರೂಢಿಸಿಕೊಳ್ಳುವ ಸುವರ್ಣಾವಕಾಶವಾಗಿದೆ” ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಯಾಂಪಸ್ ನಿರ್ದೇಶಕರು ಹಾಗೂ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಅತೀ. ವಂದನೀಯ ಗುರುಗಳಾದ ಡಾ| ಆಲ್ವಿನ್ ಸೆರಾವೊ , ಮಿಲಾಗ್ರಿಸ್ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲರು ವಂದನೀಯ ಗುರುಗಳಾದ ಉದಯ ಫೆರ್ನಾಂಡಿಸ್ , ಮಿಲಾಗ್ರಿಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಡಿಕ್ಸನ್ ಡಿಸೋಜಾ , ಕಾರ್ಯದರ್ಶಿ ಶ್ರೀಮತಿ ಜಸಿಂತಾ ಫೆರ್ನಾಂಡಿಸ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಲಿಡ್ವಿನ್ ಫೆರ್ನಾಂಡಿಸ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕಿಯಾದ ಶ್ರೀಮತಿ ಶೆರಿಲ್ ಪಿಂಟೊ ಅವರು ನೆರೆದ ಸರ್ವರನ್ನು ಸ್ವಾಗತಿಸಿದರು .ಕೊನೆಯಲ್ಲಿ ಕಾಲೇಜು ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಝೈನ್ ಶೇಖ್ ಜಾಕಿರ್ ನೆರೆದಿದ್ದ ಎಲ್ಲ ಗಣ್ಯರಿಗೆ, ಉಪನ್ಯಾಸಕರಿಗೆ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು .ಕೊನೆಯಲ್ಲಿ ಕಾಲೇಜು ಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು

















