ಟೆಲಿಗ್ರಾಂ ಪ್ರಿಯರಿಗೆ ಶಾಕ್, ಭಾರತದಲ್ಲಿ ತಾತ್ಕಾಲಿಕವಾಗಿ ಟೆಲಿಗ್ರಾಂ ಆ್ಯಪ್ ನಿಷೇಧ, ಈ ನಿರ್ಧಾರಕ್ಕೆ ಕಾರಣವೇನು?

ನವದೆಹಲಿ: ನೀಟ್ (NEET-UG 2026) ಮರುಪರೀಕ್ಷೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಟೆಲಿಗ್ರಾಮ್ ಆ್ಯಪ್ ಬಳಕೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿದ ಶಿಫಾರಸಿನ ಮೇರೆಗೆ, ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 69A ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಜೂನ್ 21ರಂದು ನಡೆಯಲಿರುವ ನೀಟ್ ಮರುಪರೀಕ್ಷೆಯ ಪಾರದರ್ಶಕತೆ ಮತ್ತು ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ಟೆಲಿಗ್ರಾಮ್‌ಗೆ ಭಾರತದಲ್ಲಿ ಜೂನ್ 22ರವರೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಕಳೆದ ಕೆಲ ದಿನಗಳಿಂದ ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಸುಳ್ಳು ಮಾಹಿತಿ ಹರಡುವುದು, ಅಭ್ಯರ್ಥಿಗಳು ಮತ್ತು ಪೋಷಕರನ್ನು ವಂಚಿಸುವ ಜಾಲಗಳು ಸಕ್ರಿಯವಾಗಿರುವುದು ಬೆಳಕಿಗೆ ಬಂದಿತ್ತು.

ಇದರ ಜೊತೆಗೆ, ಟೆಲಿಗ್ರಾಮ್‌ನ ಸಂದೇಶ ಸಂಪಾದನೆ (Message Editing) ವೈಶಿಷ್ಟ್ಯವನ್ನು ಜೂನ್ 30ರವರೆಗೆ ಭಾರತದಲ್ಲಿ ನಿಷ್ಕ್ರಿಯಗೊಳಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಈ ಫೀಚರ್ ಮೂಲಕ ಹಿಂದೆ ಪೋಸ್ಟ್ ಮಾಡಲಾದ ಸಂದೇಶಗಳ ವಿಷಯ ಮತ್ತು ಲಗತ್ತಿಸಲಾದ ಕಡತಗಳನ್ನು ಬದಲಾಯಿಸಿದರೂ ಮೂಲ ಸಮಯ (Timestamp) ಹಾಗೆಯೇ ಉಳಿಯುವುದರಿಂದ, ಪರೀಕ್ಷೆಯ ಬಳಿಕ ಪ್ರಶ್ನೆಪತ್ರಿಕೆ ಸೇರಿಸಿ ‘ಪೇಪರ್ ಲೀಕ್’ ಆಗಿತ್ತು ಎಂಬ ನಕಲಿ ಪುರಾವೆಗಳನ್ನು ಸೃಷ್ಟಿಸಲು ದುರ್ಬಳಕೆ ಮಾಡಲಾಗುತ್ತಿತ್ತು ಎಂದು ಎನ್‌ಟಿಎ ತಿಳಿಸಿದೆ.

ಎನ್‌ಟಿಎ ಹೇಳುವಂತೆ, ಕೆಲವು ವಂಚನಾ ಜಾಲಗಳು ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆಯ ಸುಳ್ಳು ಭರವಸೆ ನೀಡಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದವು. ಈ ಹಿನ್ನೆಲೆ ವೈಯಕ್ತಿಕ ಚಾನೆಲ್‌ಗಳನ್ನು ಮಾತ್ರ ತೆಗೆದುಹಾಕುವ ಕ್ರಮ ಸಾಕಾಗದೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಟೆಲಿಗ್ರಾಮ್ ಮೇಲೆಯೇ ತಾತ್ಕಾಲಿಕ ನಿರ್ಬಂಧ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ನೀಟ್ ಮರುಪರೀಕ್ಷೆ ಜೂನ್ 21ರಂದು ನಿಗದಿಯಂತೆ ನಡೆಯಲಿದ್ದು, ಅಭ್ಯರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೇ ಎನ್‌ಟಿಎ ಅಧಿಕೃತ ವೆಬ್‌ಸೈಟ್ ಹಾಗೂ ಅಧಿಕೃತ ಮಾಹಿತಿ ಮೂಲಗಳನ್ನು ಮಾತ್ರ ನಂಬುವಂತೆ ಸಂಸ್ಥೆ ಮನವಿ ಮಾಡಿದೆ.