ಲಕ್ನೋ:ರಾಮಮಂದಿರ Ram Mandir ದೇಣಿಗೆ ನಿಧಿ ದುರುಪಯೋಗದ ಆರೋಪಗಳು ಇತ್ತೀಚೆಗೆ ಜಾಸ್ತಿಯಾಗಿ ಕೇಳಿಬರುತ್ತಿರುವ ನಡುವೆ ಹೊಸ ಬೆಳವಣಿಗೆಯೊಂದು ಬೆಳಕಿಗೆ ಬಂದಿದ್ದು, ದೇವಾಲಯದ ಉದ್ಯೋಗಿಯೊಬ್ಬರ ನಿವಾಸದಲ್ಲಿ ₹10 ಲಕ್ಷದಿಂದ ₹12 ಲಕ್ಷದವರೆಗೆ ನಗದು ಹಣ ಪತ್ತೆಯಾಗಿದೆ.
ರಾಮಮಂದಿರದ ದೇಣಿಗೆ ನಿಧಿಯಿಂದ ಸುಮಾರು ₹7 ಕೋಟಿ ದುರುಪಯೋಗವಾಗಿದೆ ಎಂಬ ಆರೋಪಗಳು ಈಗಾಗಲೇ ಚರ್ಚೆಗೆ ಕಾರಣವಾಗಿದ್ದು, ಈ ಸಂಬಂಧ ಅಯೋಧ್ಯೆಯ ರುಡೌಲಿ ಪ್ರದೇಶದ ಮೀನಾಪುರ್ ಠಾಕೂರನ್ ಫಗೌಲಿ ಗ್ರಾಮದಲ್ಲಿರುವ ಉದ್ಯೋಗಿ ಲವಕುಶ್ ಮಿಶ್ರಾ ಅವರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಈ ಬೆಳವಣಿಗೆ ನಡುವೆಯೇ ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರ Nripendra Misra ಅವರು, ತಾವು ಕೇವಲ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದು, ಹಣಕಾಸು ವ್ಯವಹಾರಗಳ ತನಿಖೆಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೂಲಗಳ ಪ್ರಕಾರ, ದೇವಾಲಯದ ದೇಣಿಗೆಗಳನ್ನು ಎಣಿಸುವ ಜವಾಬ್ದಾರಿ ಹೊಂದಿದ್ದ ಇಬ್ಬರು ಉದ್ಯೋಗಿಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಮಾನತುಗೊಳಿಸಿದ್ದು, ಅವರ ವಿರುದ್ಧ ವಿಚಾರಣೆ ಮುಂದುವರಿದಿದೆ. ಈ ಇಬ್ಬರೂ ಮಾಸಿಕ ₹18,000 ರಿಂದ ₹20,000 ವೇತನ ಪಡೆಯುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಒಬ್ಬ ಉದ್ಯೋಗಿ ಸುಮಾರು ₹1.5 ಕೋಟಿ ಮೌಲ್ಯದ ಭೂಮಿಯನ್ನು ಖರೀದಿಸಿದ್ದರೆ, ಮತ್ತೊಬ್ಬರು ₹40 ಲಕ್ಷ ಮೌಲ್ಯದ ನಿವೇಶನ ಖರೀದಿಸಿರುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಇದಕ್ಕೂ ಮುನ್ನ ಪವನ್ ಪಾಂಡೆ ಅವರು ರಾಮಮಂದಿರ ದೇಣಿಗೆ ನಿಧಿಯಲ್ಲಿ ₹5 ಕೋಟಿ ರಿಂದ ₹7.5 ಕೋಟಿ ವರೆಗೆ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿ ಸಮಗ್ರ ತನಿಖೆ ನಡೆಸುವಂತೆ ಟ್ರಸ್ಟ್, ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಆರೋಪಗಳ ಸತ್ಯಾಸತ್ಯತೆ ತನಿಖೆ ಪೂರ್ಣಗೊಂಡ ನಂತರವೇ ಸ್ಪಷ್ಟವಾಗಲಿದೆ.

















