ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಸಲೇಬೇಕು! ಸರಕಾರ ಹೇಳೋದೇನು?

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳಲ್ಲಿ ನಕಲಿ ಫಲಾನುಭವಿಗಳ ಪತ್ತೆ ಮತ್ತು ಅರ್ಹರ ಮರುಪರಿಶೀಲನೆಗಾಗಿ ಹೊಸ ಅರ್ಜಿ ಪ್ರಕ್ರಿಯೆ ಜಾರಿಗೆ ತರುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಇದರಂತೆ, ಎರಡೂ ಯೋಜನೆಗಳ ಫಲಾನುಭವಿಗಳು ಮರು ಅರ್ಜಿ ಸಲ್ಲಿಸುವುದು ಕಡ್ಡಾಯವಾಗುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ D. K. Shivakumar ಅವರ ಸೂಚನೆಯಂತೆ, ಯೋಜನೆಗಳಲ್ಲಿನ ಅಕ್ರಮಗಳನ್ನು ತಡೆಗಟ್ಟಲು ಮತ್ತು ನೈಜ ಫಲಾನುಭವಿಗಳನ್ನು ಗುರುತಿಸಲು ಮರು ನೋಂದಣಿ ಪ್ರಕ್ರಿಯೆ ರೂಪಿಸಲಾಗುತ್ತಿದೆ ಎನ್ನಲಾಗಿದೆ.

ಸರ್ಕಾರದ ಮಾಹಿತಿಯ ಪ್ರಕಾರ, ಗೃಹಲಕ್ಷ್ಮಿ ಯೋಜನೆಯಲ್ಲಿ ಸುಮಾರು 1.28 ಕೋಟಿ ಫಲಾನುಭವಿಗಳಿದ್ದು, ಅವರಲ್ಲಿ ಲಕ್ಷಾಂತರ ಮಂದಿ ಆದಾಯ ತೆರಿಗೆ ಪಾವತಿದಾರರಾಗಿರುವುದು ಹಾಗೂ ಕೆಲ ಮೃತ ವ್ಯಕ್ತಿಗಳ ಖಾತೆಗಳಿಗೂ ಹಣ ಜಮೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ಮಾಹಿತಿಯನ್ನು ಮರು ಪರಿಶೀಲಿಸಲು ಸರ್ಕಾರ ಮುಂದಾಗಿದೆ.

ಇದೇ ವೇಳೆ, 1.68 ಕೋಟಿಗೂ ಅಧಿಕ ಗೃಹಜ್ಯೋತಿ ಫಲಾನುಭವಿಗಳ ವಿವರಗಳನ್ನೂ ಮರು ಪರಿಶೀಲಿಸಲಾಗುತ್ತದೆ. ಒಂದೇ ವ್ಯಕ್ತಿಯ ಹೆಸರಿನಲ್ಲಿ ಹಲವು ವಿದ್ಯುತ್ ಮೀಟರ್‌ಗಳು ಇರುವ ಪ್ರಕರಣಗಳು, ವಾಣಿಜ್ಯ ಬಳಕೆಗೆ ಗೃಹಜ್ಯೋತಿ ಸೌಲಭ್ಯ ಪಡೆಯುತ್ತಿರುವ ಆರೋಪಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಹೊಸ ಅರ್ಜಿಯಲ್ಲಿ ಏನೆಲ್ಲ ಮಾಹಿತಿ ಕೇಳಬಹುದು?

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊಸ ಅರ್ಜಿ ನಮೂನೆಯನ್ನು ಸಿದ್ಧಪಡಿಸಿದ್ದು, ಅದರಲ್ಲಿ ಸುಮಾರು 8 ರಿಂದ 10 ಪ್ರಶ್ನೆಗಳಿರಲಿವೆ ಎಂದು ತಿಳಿದುಬಂದಿದೆ. ಬಯೋಮೆಟ್ರಿಕ್ ದೃಢೀಕರಣದ ಜೊತೆಗೆ ಕೆಳಗಿನ ಮಾಹಿತಿಗಳನ್ನು ಸಲ್ಲಿಸಬೇಕಾಗುವ ಸಾಧ್ಯತೆ ಇದೆ:

  • ಮನೆಯ ಯಜಮಾನಿಯ ಹೆಸರು ಮತ್ತು ಆಧಾರ್ ಸಂಖ್ಯೆ
  • ಬ್ಯಾಂಕ್ ಖಾತೆ ವಿವರಗಳು
  • ಕುಟುಂಬ ಸದಸ್ಯರ ಮಾಹಿತಿ
  • ಜಾತಿ ವಿವರ
  • ಪತಿಯ ಹೆಸರು ಮತ್ತು ಆಧಾರ್ ಸಂಖ್ಯೆ
  • ಆಧಾರ್ ಕಾರ್ಡ್ ದಾಖಲೆ
  • ಆದಾಯ ತೆರಿಗೆ (IT) ಅಥವಾ ಜಿಎಸ್‌ಟಿ (GST) ಪಾವತಿದಾರರೇ ಎಂಬ ಮಾಹಿತಿ
  • ಎಪಿಎಲ್ ಅಥವಾ ಬಿಪಿಎಲ್ ಪಡಿತರ ಚೀಟಿ ವಿವರ

ಅರ್ಜಿ ಸಲ್ಲಿಕೆ ಎಲ್ಲಿ?

ಸರ್ಕಾರ ಶೀಘ್ರದಲ್ಲೇ ಅಧಿಕೃತ ಮಾರ್ಗಸೂಚಿ ಪ್ರಕಟಿಸುವ ನಿರೀಕ್ಷೆಯಿದೆ. ಅರ್ಜಿ ಸಲ್ಲಿಕೆಗೆ:

  • ಬೆಂಗಳೂರು ಒನ್
  • ಕರ್ನಾಟಕ ಒನ್
  • ಗ್ರಾಮ ಒನ್ ಕೇಂದ್ರಗಳು
  • ಆನ್‌ಲೈನ್ ಪೋರ್ಟಲ್
  • ಆಫ್‌ಲೈನ್ ವ್ಯವಸ್ಥೆ

ಮೂಲಕ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

ಆದರೆ, ಈವರೆಗೆ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಅಥವಾ ಅರ್ಜಿ ಸಲ್ಲಿಕೆ ದಿನಾಂಕ ಪ್ರಕಟವಾಗಿಲ್ಲ. ಆದ್ದರಿಂದ ಫಲಾನುಭವಿಗಳು ಅಧಿಕೃತ ಪ್ರಕಟಣೆಗಾಗಿ ಕಾಯುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.