ಬೆಂಗಳೂರು: ಪ್ರಸಕ್ತ 2026-27ನೇ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕವನ್ನು ಹೆಚ್ಚಳ ಮಾಡದೆ ಕಳೆದ ವರ್ಷದ ದರಗಳನ್ನೇ ಮುಂದುವರಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ಈ ನಿರ್ಧಾರದಿಂದ ವೈದ್ಯಕೀಯ ಶಿಕ್ಷಣದ ಶುಲ್ಕ ಹೆಚ್ಚಳವಾಗುವ ಆತಂಕದಲ್ಲಿದ್ದ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ನೆಮ್ಮದಿ ಸಿಕ್ಕಂತಾಗಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ಶುಕ್ರವಾರ ನಡೆದ ಖಾಸಗಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಖಾಸಗಿ ಕಾಲೇಜುಗಳ ಶುಲ್ಕ ಹೆಚ್ಚಳದ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. 2025-26ನೇ ಸಾಲಿನಲ್ಲಿ ನಿಗದಿಪಡಿಸಿದ್ದ ಶುಲ್ಕವನ್ನೇ ಈ ವರ್ಷವೂ ಮುಂದುವರಿಸಲಾಗುವುದು ಎಂದು ತಿಳಿಸಿದರು.
ನೀಟ್ ಪರೀಕ್ಷೆ ಕುರಿತ ಅನಿಶ್ಚಿತತೆ ಮತ್ತು ಮರುಪರೀಕ್ಷೆಯ ಕಾರಣ ವಿದ್ಯಾರ್ಥಿಗಳು ಈಗಾಗಲೇ ಒತ್ತಡದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಶುಲ್ಕ ಹೆಚ್ಚಳ ಮಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಸಚಿವರು ಹೇಳಿದರು.
ಅಲ್ಲದೆ, ಶುಲ್ಕ ಹೆಚ್ಚಳದ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮನವಿ ಮಾಡಿದರು.
ಎಂಬಿಬಿಎಸ್ (MBBS) ಶುಲ್ಕ ವಿವರ
- ಸರ್ಕಾರಿ ಕಾಲೇಜು – ₹55,000
- ಕೆಪಿಸಿಎಫ್ ಸರ್ಕಾರಿ ಕೋಟಾ – ₹1,41,621
- ಕೆಆರ್‌ಎಲ್‌ಎಂಪಿಸಿಎ ಸರ್ಕಾರಿ ಕೋಟಾ – ₹1,41,621
- ಎಎಂಪಿಸಿಕೆ ಸರ್ಕಾರಿ ಕೋಟಾ – ₹1,41,621
- ಖಾಸಗಿ ವಿಶ್ವವಿದ್ಯಾಲಯಗಳ ಸರ್ಕಾರಿ ಕೋಟಾ – ₹1,41,621
- ಕೆಪಿಸಿಎಫ್ ಖಾಸಗಿ ಕೋಟಾ – ₹11,88,167
- ಕೆಆರ್‌ಎಲ್‌ಎಂಪಿಸಿಎ ಖಾಸಗಿ ಕೋಟಾ – ₹11,88,167
- ಎಎಂಪಿಸಿಕೆ ಖಾಸಗಿ ಕೋಟಾ – ₹11,88,167
ಬಿಡಿಎಸ್ (BDS) ಶುಲ್ಕ ವಿವರ
- ಸರ್ಕಾರಿ ಕಾಲೇಜುಗಳ ಕೋಟಾ – ₹40,000
- ಕೆಪಿಸಿಎಫ್ ಸರ್ಕಾರಿ ಕೋಟಾ – ₹83,358
- ಕೆಆರ್‌ಎಲ್‌ಎಂಪಿಸಿಎ ಸರ್ಕಾರಿ ಕೋಟಾ – ₹83,358
- ಎಎಂಪಿಸಿಕೆ ಸರ್ಕಾರಿ ಕೋಟಾ – ₹83,358
- ಕೆಪಿಸಿಎಫ್ ಖಾಸಗಿ ಕೋಟಾ – ₹7,32,625
- ಕೆಆರ್‌ಎಲ್‌ಎಂಪಿಸಿಎ ಖಾಸಗಿ ಕೋಟಾ – ₹7,32,625
- ಎಎಂಪಿಸಿಕೆ ಖಾಸಗಿ ಕೋಟಾ – ₹7,32,625
ಸಭೆಯಲ್ಲಿ ರಾಧಾಕೃಷ್ಣ, ನಾಗರಾಜ್ ಯಾದವ್, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೋಸಿನ್ ಸೇರಿದಂತೆ ವಿವಿಧ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ನಿರ್ಧಾರದಿಂದ ವೈದ್ಯಕೀಯ ಶಿಕ್ಷಣ ಪಡೆಯಲು ಸಜ್ಜಾಗಿರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಆರ್ಥಿಕ ಹೊರೆ ತಪ್ಪಿದಂತಾಗಿದ್ದು, ಪ್ರವೇಶ ಪ್ರಕ್ರಿಯೆಗೆ ಹೆಚ್ಚಿನ ಸ್ಪಷ್ಟತೆ ದೊರೆತಿದೆ.















