ವಿದ್ಯಾರ್ಥಿಗಳೇ ಗಮನಿಸಿ, ಉಚಿತ ಬಸ್ ಪಾಸ್ ಗೆ ಇವತ್ತಿನಿಂದಲೇ ಅರ್ಜಿ ಸಲ್ಲಿಕೆ ಶುರು,ಹೇಗೆ ಅರ್ಜಿ ಸಲ್ಲಿಸಬೇಕು?

ರಾಜ್ಯದ ಶಾಲೆ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಈಗಾಗಲೇ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಲಭ್ಯವಿರುವುದರಿಂದ ಅವರು ಪ್ರತ್ಯೇಕವಾಗಿ ಬಸ್ ಪಾಸ್ ಪಡೆಯುವ ಅಗತ್ಯವಿಲ್ಲ. ಮುಖ್ಯಮಂತ್ರಿ ಘೋಷಿಸಿರುವ ನೂತನ ಉಚಿತ ಬಸ್ ಪಾಸ್ ಯೋಜನೆ ಕೇವಲ ಗಂಡು ವಿದ್ಯಾರ್ಥಿಗಳಿಗೆ ಅನ್ವಯವಾಗಲಿದ್ದು, ಪಾಸ್ ಪಡೆಯಲು ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕಿದೆ.

ಈಗಾಗಲೇ ಹಣ ಪಾವತಿಸಿ ಬಸ್ ಪಾಸ್ ಪಡೆದಿರುವ ವಿದ್ಯಾರ್ಥಿಗಳಿಗೆ ಮುಂದಿನ 15 ದಿನಗಳೊಳಗೆ ಪಾವತಿಸಿದ ಮೊತ್ತವನ್ನು ಮರುಪಾವತಿ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.

ಉಚಿತ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ವಿದ್ಯಾರ್ಥಿಯ ನಿವಾಸದಿಂದ ಶಿಕ್ಷಣ ಸಂಸ್ಥೆಯವರೆಗೆ ಇರುವ ನಿಗದಿತ ದೂರದ ಆಧಾರದ ಮೇಲೆ ಪಾಸ್ ಮಂಜೂರು ಮಾಡಲಾಗುತ್ತದೆ. ಪಾಸ್‌ನ ಅವಧಿಯನ್ನು ವಿದ್ಯಾರ್ಥಿಯ ಪ್ರಸ್ತುತ ಶೈಕ್ಷಣಿಕ ವರ್ಷದ ಅವಧಿಗೆ ಅನುಗುಣವಾಗಿ ನಿಗದಿಪಡಿಸಲಾಗುತ್ತದೆ.

ಅರ್ಹ ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್ ಮೂಲಕ ಶಾಲೆ, ಕಾಲೇಜು ಅಥವಾ ಯಾವುದೇ ಸ್ಥಳದಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಶಾಲೆ/ಕಾಲೇಜು ಪ್ರವೇಶಾತಿ ರಶೀದಿ
  • ಇತ್ತೀಚಿನ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು

ಪಾಸ್ ವಿತರಣಾ ಕೇಂದ್ರಗಳು:

ಬೆಂಗಳೂರಿನ ಮೆಜೆಸ್ಟಿಕ್, ಕೆಂಗೇರಿ, ಶಾಂತಿನಗರ, ಎಲೆಕ್ಟ್ರಾನಿಕ್ ಸಿಟಿ, ಹೊಸಕೋಟೆ ಹಾಗೂ ಆನೇಕಲ್‌ನ ಟಿಟಿಎಂಸಿ ಕೇಂದ್ರಗಳು ಸೇರಿದಂತೆ ರಾಜ್ಯದ ಪ್ರಮುಖ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಭೌತಿಕ ಬಸ್ ಪಾಸ್‌ಗಳನ್ನು ವಿತರಿಸಲಾಗುತ್ತದೆ.