ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಿ ‘ಕರ್ತವ್ಯ’ ಆ್ಯಪ್ ಮೂಲಕ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದೆ. ನೌಕರರು ಕಚೇರಿಯಲ್ಲೇ ಇದ್ದು ಹಾಜರಾತಿ ಗುರುತಿಸಬೇಕೆಂಬ ಉದ್ದೇಶದಿಂದ ಸರ್ಕಾರ ಜಿಯೋ-ಟ್ಯಾಗ್ಡ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಈ ಸಂಬಂಧ ರಾಜ್ಯದ ಎಲ್ಲ ಇಲಾಖೆಗಳ ಮುಖ್ಯಸ್ಥರು ಹಾಗೂ ಡ್ರಾಯಿಂಗ್ ಮತ್ತು ಡಿಸ್ಬರ್ಸಿಂಗ್ ಅಧಿಕಾರಿಗಳಿಗೆ ಹಣಕಾಸು ಇಲಾಖೆಯ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ವಿಭಾಗ ಸುತ್ತೋಲೆ ಹೊರಡಿಸಿದೆ. ಅದರಂತೆ, ಪ್ರತಿಯೊಂದು ಸರ್ಕಾರಿ ಕಚೇರಿಯ ಭೌಗೋಳಿಕ ಸ್ಥಳಾಂಕಗಳ ಪರಿಶೀಲನೆ ಮತ್ತು ದೃಢೀಕರಣ ನಡೆಸುವಂತೆ ಸೂಚಿಸಲಾಗಿದೆ.
ಹೊಸ ವ್ಯವಸ್ಥೆಯಲ್ಲಿ ನೌಕರರು ಕಚೇರಿಗೆ ಬಂದ ಬಳಿಕವೇ ಹಾಜರಾತಿ ದಾಖಲಿಸಬಹುದಾಗಿದೆ. ಜಿಯೋ-ಕೋಆರ್ಡಿನೇಟ್ ತಂತ್ರಜ್ಞಾನದ ಮೂಲಕ ನೌಕರರು ನಿಗದಿತ ಕಚೇರಿ ಸ್ಥಳದಲ್ಲಿದ್ದಾರೆಯೇ ಎಂಬುದನ್ನು ವ್ಯವಸ್ಥೆ ಖಚಿತಪಡಿಸಲಿದೆ. ಇದರಿಂದ ಬೇರೆ ಸ್ಥಳದಿಂದ ಹಾಜರಾತಿ ದಾಖಲಿಸುವ ಅವಕಾಶ ಇರುವುದಿಲ್ಲ.
ಈ ಹಿನ್ನೆಲೆಯಲ್ಲಿ ರಾಜ್ಯದ ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ‘ಕರ್ತವ್ಯ’ ಆ್ಯಪ್ ಅನ್ನು ಎಲ್ಲಾ ಸರ್ಕಾರಿ ನೌಕರರು ಡೌನ್‌ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ಈ ಹಿಂದೆ ಜಾರಿಯಲ್ಲಿದ್ದ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಹಲವು ಕಡೆಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಯಂತ್ರಗಳ ದುರಸ್ತಿ ನೆಪದಲ್ಲಿ ಹಾಜರಾತಿ ವ್ಯವಸ್ಥೆಯನ್ನು ನಿರ್ಲಕ್ಷಿಸಲಾಗುತ್ತಿತ್ತು ಎನ್ನಲಾಗಿದೆ.
ಹೊಸ ಜಿಯೋ-ಟ್ಯಾಗ್ಡ್ ವ್ಯವಸ್ಥೆಯಲ್ಲಿ ನೌಕರರು ಕಚೇರಿಯಲ್ಲೇ ಹಾಜರಿದ್ದು, ನೈಜ ಸಮಯದಲ್ಲಿ (ರಿಯಲ್ ಟೈಮ್) ಹಾಜರಾತಿ ದಾಖಲಿಸಬೇಕಾಗುತ್ತದೆ. ಇದರಿಂದ ಹಾಜರಾತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸಮಯ ಪಾಲನೆ ಹೆಚ್ಚುವ ನಿರೀಕ್ಷೆಯಿದೆ.
ಈ ವ್ಯವಸ್ಥೆಯನ್ನು ಮೊದಲಿಗೆ ಆರೋಗ್ಯ ಇಲಾಖೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಅಲ್ಲಿ ಉತ್ತಮ ಫಲಿತಾಂಶ ಕಂಡುಬಂದ ಹಿನ್ನೆಲೆಯಲ್ಲಿ ಇದೀಗ ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳಿಗೂ ವಿಸ್ತರಿಸಲಾಗಿದೆ.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಿ ‘ಕರ್ತವ್ಯ’ ಆ್ಯಪ್‌ನಲ್ಲಿ ಹಾಜರಾತಿ ದಾಖಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹಾಜರಾತಿ ದಾಖಲಿಸದ ನೌಕರರ ಕುರಿತು ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಇದೇ ವೇಳೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಹಿರಿಯ ಅಧಿಕಾರಿಗಳ ಸಭೆಯಲ್ಲೇ ಸರ್ಕಾರಿ ನೌಕರರು ಸಮಯ ಪಾಲನೆಯನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಸೂಚಿಸಿದ್ದರು. ಅದರ ಬೆನ್ನಲ್ಲೇ ಸರ್ಕಾರ ಈ ಹೊಸ ಡಿಜಿಟಲ್ ಹಾಜರಾತಿ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೆ ತಂದಿದೆ.















