ಬೆಳ್ತಂಗಡಿ: 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ವ್ಯಕ್ತಿಯೊಬ್ಬರು ಅಚ್ಚರಿಯ ರೀತಿಯಲ್ಲಿ ತಮ್ಮ ಕುಟುಂಬವನ್ನು ಮತ್ತೆ ಸೇರಿಕೊಂಡ ಘಟನೆ ಧರ್ಮಸ್ಥಳದ ಅಶೋಕನಗರದಲ್ಲಿ ನಡೆದಿದೆ.
ಸತೀಶ್ ಎಂಬ ಯುವಕ 19ನೇ ವಯಸ್ಸಿನಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದೊಂದಿಗೆ ಮಹಾರಾಷ್ಟ್ರಕ್ಕೆ ತೆರಳಿದ್ದ. ಬಳಿಕ ಹಲವು ವರ್ಷಗಳ ಕಾಲ ಅಲ್ಲೇ ಕೆಲಸ ಮಾಡಿಕೊಂಡು ತನ್ನ ಊರು ಹಾಗೂ ಕುಟುಂಬದ ನೆನಪು ಕಳೆದುಕೊಂಡಿದ್ದ. ಇತ್ತೀಚೆಗೆ ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಬಂದ ವೇಳೆ ಬಾಲ್ಯದ ನೆನಪುಗಳು ಮರುಕಳಿಸಿ, ತನ್ನ ಊರನ್ನು ಗುರುತಿಸಿದ್ದಾನೆ.
ತಮ್ಮಂದಿರ ಹೆಸರು ನೆನಪಿದ್ದ ಕಾರಣ ಸ್ಥಳೀಯರ ಸಹಾಯದಿಂದ ಮನೆಯ ವಿಳಾಸ ಪತ್ತೆಹಚ್ಚಿ ಕೊನೆಗೂ ಕುಟುಂಬವನ್ನು ಸೇರಿಕೊಂಡಿದ್ದಾನೆ. ಮಗನಿಗಾಗಿ ವರ್ಷಗಳ ಕಾಲ ದೇವರ ಬಳಿ ಹರಕೆ ಹೊತ್ತಿದ್ದ ತಾಯಿಯ ಆಶೆಯೂ ಈಡೇರಿದೆ.
ವಿಶೇಷವೆಂದರೆ, ಮನೆ ಬಿಟ್ಟು ಹೋದಾಗ ಸತೀಶ್ ಆಗಿದ್ದ ಆತ ಈಗ ಮಹಾರಾಷ್ಟ್ರದಲ್ಲಿ ಸಲೀಂ ಅಬ್ದುಲ್ ಅನ್ಸಾರಿ ಆಗಿದ್ದಾನೆ. ತಾಲೀಮಾ ಅವರನ್ನು ವಿವಾಹವಾಗಿರುವ ಸಲೀಂಗೆ ಇಬ್ಬರು ಮಕ್ಕಳಿದ್ದಾರೆ. 26 ವರ್ಷಗಳ ಬಳಿಕ ಮನೆಗೆ ಮರಳಿದ ಆತ ಕನ್ನಡ ಮತ್ತು ತುಳು ಭಾಷೆ ಮರೆತು ಸಂಪೂರ್ಣ ಹಿಂದಿಯಲ್ಲೇ ಮಾತನಾಡುತ್ತಿರುವುದು ಕುಟುಂಬದವರಲ್ಲಿ ಅಚ್ಚರಿ ಮೂಡಿಸಿದೆ.















