ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಅವಹೇಳನಕಾರಿ ಕಾಮೆಂಟ್‌; ಓರ್ವ ಬಂಧನ

ಉಡುಪಿ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ರಾಜ್ಯದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರ ವಿರುದ್ಧ ಅವಹೇಳನಕಾರಿ ಹಾಗೂ ಜಾತಿನಿಂದನಾತ್ಮಕ ಕಾಮೆಂಟ್‌ ಮಾಡಿ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಕಾರ್ಕಳ ಪೊಲೀಸರು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.

ಕಾರ್ಕಳ ತಾಲೂಕಿನ ಕೇರ್ವಾಶೆ ನಲ್ಕೆದಬೆಟ್ಟು ನಿವಾಸಿ ಸುಧೀರ ಬಂಗೇರ (48) ಬಂಧಿತ ಆರೋಪಿ. ‘ನಮ್ಮ ಕಾರ್ಲ’ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಭಾವಚಿತ್ರದೊಂದಿಗೆ ಅವರ ಹೇಳಿಕೆಯೊಂದನ್ನು ಪೋಸ್ಟ್‌ ಮಾಡಲಾಗಿತ್ತು.

ಈ ಪೋಸ್ಟ್‌ಗೆ ಜೂನ್‌ 6ರಂದು ಸುಧೀರ ಬಂಗೇರ ಎಂಬಾತ ಕಾಮೆಂಟ್‌ ಮಾಡಿದ್ದು, ಅದರಲ್ಲಿ ಸಚಿವರ ವಿರುದ್ಧ ಅವಹೇಳನಕಾರಿ, ಜಾತಿನಿಂದನಾತ್ಮಕ ಪದಗಳನ್ನು ಬಳಸಿರುವುದಲ್ಲದೆ ಜೀವ ಬೆದರಿಕೆಯನ್ನೂ ಒಡ್ಡಿರುವುದಾಗಿ ಆರೋಪಿಸಲಾಗಿದೆ.

ಈ ಕುರಿತು ಕಾರ್ಕಳ ನಿಟ್ಟೆ ಅತ್ತೂರು ನಿವಾಸಿ ಸುರೇಶ್‌ ಚೇತನಹಳ್ಳಿ ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸಾಮಾಜಿಕ ಶಾಂತಿ ಹಾಗೂ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪದಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.