ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಹೊಣೆ: ಎಂ.ಪುರುಷೋತ್ತಮ್

ಉಡುಪಿ: ಮನುಷ್ಯ ಸಂಕುಲ ಉಳಿವಿಗಾಗಿ ಪ್ರಕೃತಿ ಹಾಗೂ ಜೀವ ವೈವಿಧ್ಯಗಳು ತನ್ನದೇ ರೀತಿಯಲ್ಲಿ ಕೊಡುಗೆ ನೀಡುತ್ತಾ ಬರುತ್ತಿದೆ. ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಪ್ರಕೃತಿಯನ್ನು ಸಂರಕ್ಷಿಸುವ ಕೆಲಸವನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ನಿಷ್ಠೆಯಿಂದ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಮ್ ಪುರುಷೋತ್ತಮ್ ಹೇಳೀದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ, ನಗರಸಭೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕೈಗಾರಿಕೆಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮನುಷ್ಯ ಬದುಕಲು ಗಾಳಿ, ನೀರು, ಆಹಾರ ವಸ್ತುಗಳನ್ನು ಉಚಿತವಾಗಿ ಪ್ರಕೃತಿಯಿಂದ ಪಡೆಯುತ್ತಿರುವ ನಾವುಗಳು ಪ್ರಕೃತಿಯ ರಕ್ಷಣೆಗೂ ಸಹ ಮುಂದಾಗಬೇಕು. ಪ್ರತೀ ವರ್ಷ ಜೂನ್ 5 ನ್ನು ವಿಶ್ವ ಪರಿಸರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಇದು ಕೇವಲ ಆಚರಣೆಗೆ ಸೀಮಿತವಾಗಿರದೇ, ಪ್ರಕೃತಿಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಉಳಿಸುವ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದರು.

ನಮ್ಮ ಆಧುನಿಕ ಜೀವನ ಶೈಲಿಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅಳವಡಿಸಿಕೊಂಡಿರುವ ಆಧುನೀಕರಣ, ವ್ಯಾಪಾರೀಕರಣ, ಕೈಗಾರಿಕೀಕರಣ, ಸೇರಿದಂತೆ ಅನೇಕ ವಿಷಯ, ವಸ್ತುಗಳು ಹಾಗೂ ಆಚರಣೆಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಪ್ರಕೃತಿಗೆ ಹಾನಿಯಾಗುವಂತಹ ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಅಧಿಕಾರಿಗಳು, ಸಂಘ-ಸoಸ್ಥೆಗಳೊoದಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದರು. ನಮ್ಮ ಸಂವಿಧಾನದಲ್ಲಿ ಮಾನವನು ಸ್ವತಂತ್ರವಾಗಿ ಜೀವಿಸಲು ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಲಾಗಿದೆ. ಅದರಂತೆ ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ ಎಂದು ಆರ್ಟಿಕಲ್ 51 (ಎ) (ಜಿ) ತಿಳಿಸುತ್ತದೆ.

ಯುವ ಜನಾಂಗದಿoದ ಯಾವುದೇ ಕೆಲಸ- ಕಾರ್ಯಗಳು ಸಮರ್ಪಕವಾಗಿ ಅನುಷ್ಠಾನವಾಗಲು ಸಾಧ್ಯ. ಪರಿಸರ ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಕ್ಕಳು ಜಾಗೃತಿ ಹೊಂದುವುದರೊoದಿಗೆ, ಇಡೀ ಸಮುದಾಯಕ್ಕೆ ಈ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳು ಗಿಡಗಳನ್ನು ನೆಟ್ಟು ಬೆಳೆಸಿ, ಅವುಗಳನ್ನು ಪೋಷಿಸಿ, ಪ್ರಕೃತಿಯ ನೈರ್ಮಲ್ಯ ಕಾಪಾಡುವುದರೊಂದಿಗೆ ಪರಿಸರ ಸ್ನೇಹಿ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂದ ಅವರು, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಪ್ರಮುಖವಾದುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ಮಾನವನ ಅತಿಯಾದ ದುರಾಸೆ, ಕೈಗಾರೀಕರಣ ಸೇರಿದಂತೆ ಅಭಿವೃದ್ಧಿಯ ಹೆಸರಿನಲ್ಲಿ ಮಾನವನಿಂದ ಪ್ರಕೃತಿಯ ಮೇಲೆ ಆಗುತ್ತಿರುವ ದೌರ್ಜನ್ಯದಿಂದ ಪರಿಸರ ಮಾಲಿನ್ಯ ತಾರಕಕ್ಕೇ ಏರುತ್ತಲೇ ಇದೆ. ಪ್ರಸ್ತುತ ಹವಾಮಾನ ಬದಲಾವಣೆಯಿಂದಾಗಿ ಜಾಗತಿಕ ತಾಪಮಾನ ಏರಿಕೆ, ಪ್ರಾಕೃತಿಕ ವಿಕೋಪ ಸೇರಿದಂತೆ ಮತ್ತಿತರ ಅವಘಡಗಳು ಭೂಮಿಯ ಮೇಲೆ ಸಂಭವಿಸುತ್ತಲೇ ಇವೆ. ಪರಿಸರದ ಮಹತ್ವವನ್ನು ಅರಿತಾಗ ಅದನ್ನು ನಾಶ ಮಾಡಲು ಯಾರೊಬ್ಬರೂ ಮುಂದಾಗುವುದಿಲ್ಲ ಎಂದ ಅವರು, ಪರಿಸರ ಸಂರಕ್ಷಣೆಯ ಹಾದಿಯನ್ನು ಪ್ರತಿಯೊಬ್ಬರೂ ಪಾಲಿಸುವುದರೊಂದಿಗೆ, ಅರಣ್ಯ ಬೆಳೆಸುವಲ್ಲಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುವತ್ತ ಗಮನಹರಿಸಬೇಕು.

ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಅರ್ಥಪೂರ್ಣವಾಗಿ ನಿಭಾಯಿಸಬೇಕಿದೆ ಎಂದರು.

ಕ.ರಾ.ಮಾ.ನಿ.ಮಂ.ಮoಗಳೂರು ವಿಭಾಗೀಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ರಾಜಶೇಖರ್ ಬಿ ಪುರಾಣಿಕ್ ಮಾತನಾಡಿ, ಪರಿಸರ ರಕ್ಷಣೆಯ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಜೂನ್ 5 ನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ. ಮಾನವ ಚಟುವಟಿಕೆಗಳಿಂದ ಪರಿಸರಕ್ಕೆ ಆಗುವ ಹಾನಿಯನ್ನು ತಡೆಗಟ್ಟಿ ಭೂಮಿಯನ್ನು ರಕ್ಷಿಸುವುದು ಆಚರಣೆಯ ಗುರಿಯಾಗಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಆಗ ಮಾತ್ರ ಪರಿಸರವನ್ನು ಸುಸ್ಥಿತಿಯಲ್ಲಿಟ್ಟು ಮುಂದಿನ ಜನಾಂಗಕ್ಕೆ ಆರೋಗ್ಯಕರ ಪರಿಸರ ನೀಡಲು ಸಾಧ್ಯ ಎಂದ ಅವರು, ತ್ಯಾಜ್ಯ ವಸ್ತುಗಳನ್ನು ಮೂಲದಲ್ಲಿಯೇ ಬೇರ್ಪಡಿಸುವುದು, ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಕಡಿವಾಣ ಹಾಕುವುದು, ಮರ-ಗಿಡಗಳನ್ನು ಬೆಳೆಸುವುದು, ಜೀವ ಸಂಕುಲಗಳನ್ನು ರಕ್ಷಿಸುವುದು ಸೇರಿದಂತೆ ಮತ್ತಿತರ ವಿಷಯಗಳು ಪರಿಸರ ಸಂರಕ್ಷಣೆಗೆ ಪೂರಕವಾಗಲಿದೆ ಎಂದರು.

ಕ.ರಾ.ಮಾ.ನಿ.ಮಂ. ಪ್ರಾದೇಶಿಕ ಕಚೇರಿಯ ಜಿಲ್ಲಾ ಪರಿಸರ ಅಧಿಕಾರಿ ಕೆ.ಕೀರ್ತಿ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಡಾ. ಅಶೋಕ್ ಕಾಮತ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ ಶೆಟ್ಟಿ ಮಾತನಾಡಿದರು.

ಮಣಿಪಾಲ ಎಂ.ಐ.ಟಿ ಯ ಅಧ್ಯಾಪಕರ ಕಲ್ಯಾಣಾಭಿವೃದ್ಧಿ ವಿಭಾಗದ ಸಹ ನಿರ್ದೇಶಕ ಡಾ ರಾಘವೇಂದ್ರ ಕೆ ಹೊಳ್ಳ ಬಿ ವಿಶೇಷ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಚಿತ್ರಕಲಾ ಸ್ಪರ್ಧೆ ಹಾಗೂ ರೀಲ್ಸ್ ಸ್ಪರ್ಧೆಯ ವಿಜೇತರುಗಳಿಗೆ ಬಹುಮಾನ ವಿತರಿಸಲಾಯಿತು ಹಾಗೂ ಪರಿಸರಕ್ಕೆ ಪೂರಕವಾಗಿರುವ ಜೂಟ್ ಬ್ಯಾಗುಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರುಗಳು, ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಉಪ ಪರಿಸರ ಅಧಿಕಾರಿ ಡಾ. ಅಮೃತ ಎ.ಎಸ್ ಸ್ವಾಗತಿಸಿ, ಅವಿನಾಶ್ ಕಾಮತ್ ನಿರೂಪಿಸಿದರೆ, ಪರಿಸರ ಇಲಾಖೆಯ ಸಿಬ್ಬಂದಿ ರಾಜೇಶ್ವರಿ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಹಿರಿಯ ಸಿವಿಲ್ ನ್ಯಾಯಾಧೀಶ ಎಮ್ ಪುರುಷೋತ್ತಮ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.